ದೇಶದಲ್ಲಿ ತಗ್ಗದ ಕಮಲದ ಅಲೆ | ಮಧ್ಯಪ್ರದೇಶ, ಅಸ್ಸಾಂ, ಮಿಜೋರಂನಲ್ಲಿ ಬಿಜೆಪಿ ಮೇಲುಗೈ
ನವದೆಹಲಿ: ದೇಶದ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ವಿಧಾನಸಭೆ ಮತ್ತು 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು,ಯಾವ ಪಕ್ಷ ತಲೆ ಎತ್ತಿದೆ ಯಾವ ಪಕ್ಷಕ್ಕೆ ಮುಖ ಭಂಗವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಮತದಾನ ನಡೆದಿತ್ತು. ಅಸ್ಸಾಂ ಮತ್ತು ಮಧ್ಯ ಪ್ರದೇಶಗಳಲ್ಲಿ ಬಿಜೆಪಿ ಬಲ ವೃದ್ಧಿಯಾಗಿದೆ. ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಂಪೂರ್ಣ ಮೇಲುಗೈ ಸಾಧಿಸಿದೆ. ನಾಲ್ಕು ವಿಧಾನಸಭಾ ಕ್ಷೇತ್ರ ಪೈಕಿ ಈ ಹಿಂದೆ ಚುನಾವಣೆ ನಡೆದಾಗ ಎರಡರಲ್ಲಿ ಬಿಜೆಪಿ ಗೆಲುವು ಕಂಡಿತ್ತು.
ವಿರೋಧಿ ರಾಜಕೀಯದ ಮುಖವಾಣಿಯಾಗಿ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಕಾರಣದ ಕಡೆಗೆ ಮುಖ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಮತ್ತು ಈ ಉಪಚುನಾವಣೆಗಳಲ್ಲಿ ಸಿಕ್ಕ ಅಭೂತಪೂರ್ವ ಗೆಲುವಿನ ಕಾರಣ,ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧೆ ನೀಡುವ ಲೆಕ್ಕಾಚಾರ ನಡೆಸಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಆಳ್ವಿಕೆ ಇದ್ದು ಹಿಮಂತ ಬಿಸ್ವಾ ಶರ್ವಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಆಡಳಿತಕ್ಕೂ ಜನಮನ್ನಣೆ ಸಿಕ್ಕಿದೆ. ತೆಲಂರ್ಗಾ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಉಳಿಸಿಕೊಂಡಿದೆ. ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಿದೆ. ಒಂದು ಲೋಕಸಭೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಸೋಲು ಕಂಡಿದೆ. ಜುಬ್ಬಲ್ ಕೊಟಖಾಯ್ ಕ್ಷೇತ್ರದಲ್ಲಿ ಠೇವಣಿಯನ್ನೇ ಕಳೆದುಕೊಂಡ ಬಿಜೆಪಿ ಮುಖಭಂಗ ಅನುಭವಿಸಿದೆ. ಜೈರಾಮ್ ಠಾಕೂರ್ ಮುಂದಿನ ವರ್ಷ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭಾರಿ ರಾಜಕೀಯ ಬದಲಾವಣೆಯ ಮುನ್ಸೂಚನೆ ಕಂಡುಬಂದಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಭಿನ್ನಮತ ಇದ್ದರೂ ಅದರ ಪ್ರಯೋಜನ ಪಡೆಯುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಮಾಜಿ ಸಿಎಂ ವಸುಂಧರಾ ರಾಜೇ ಅವರ ಪ್ರಯತ್ನವೂ ಫಲಿಸಿಲ್ಲ. ಇಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿರುವುದಷ್ಟೇ ಅಲ್ಲ, ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಮಹಾರಾಷ್ಟ್ರ ಹೊರಗೆ ಶಿವಸೇನೆಗೆ ಮೊದಲ ಗೆಲುವು ದಕ್ಕಿದೆ.ಕೇಂದ್ರಾಡಳಿತ ಪ್ರದೇಶ ದಾದ್ರ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರವನ್ನು ಶಿವಸೇನೆ ಗೆದ್ದುಕೊಂಡಿದೆ. ಮಹಾರಾಷ್ಟ್ರದ ಹೊರಗಿನಿಂದ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದೆ. ಇಲ್ಲಿ ಶಿವಸೇನೆಯ ಕಲಾಬೆನ್ ದೇಲ್ಕರ್ ಬಿಜೆಪಿ ಮಹೇಶ್ ಗವಿತ್ ವಿರುದ್ಧ 51 ಸಾವಿರ ಮತಕ್ಕೂ ಹೆಚ್ಚಿನ ಅಂತರದಿಂದ ವಿಜಯಿಯಾಗಿದ್ದಾರೆ. ಪಕ್ಷೇತರರಾಗಿ ಆಯ್ಕೆ ಆಗಿದ್ದ ಕಲಾಬೆನ್ ಮೋಹನ್ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಉಪಚುನಾವಣೆ ನಡೆಯಿತು.
ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜ್ಞಾನೇಶ್ವರ ಪಾಟೀಲ್ ಕಾಂಗ್ರೆಸ್‌ನ ಮಾಜಿ ಶಾಸಕ ರಾಜನಾರಾಯಣ ಸಿಂಗ್ ಪೂರ್ಣಿ ವಿರುದ್ಧ 82 ಸಾವಿರಕ್ಕೂ ಅಧಿಕ ಮತದಿಂದ ಗೆದ್ದಿದ್ದಾರೆ. ಬಿಜೆಪಿಯಿಂದ ಚುನಾಯಿತರಾಗಿದ್ದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ ಕಾರಣ ಇಲ್ಲಿ ಚುನಾವಣೆ ನಡೆಯಿತು. ಈ ಕ್ಷೇತ್ರವನ್ನು ಅವರು 1996ರಿಂದ 2019ರವರೆಗೆ ನಡೆದ ಆರು ಚುನಾವಣೆ ಯಲ್ಲಿ ಪ್ರತಿನಿಧಿಸಿದ್ದರು.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತುಕೊಂಡಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಜಯಗಳಿಸಿದ್ದಾರೆ. ಬಿಜೆಪಿಯ ಕುಶಾಲ್ ಠಾಕೂರ್ ಅವರನ್ನು 7 ಸಾವಿರ ಮತಗಳಿಂದ ಪರಾಭವಗೊಳಿಸಿದ್ದಾರೆ.