ಪೆರಾಬೆ : ಸರ್ಕಾರಿ ಜಾಗಕ್ಕೆ ಗ್ರಾ.ಪಂ ಅಳವಡಿಸಿದ್ದ ತಂತಿ ಬೇಲಿಯನ್ನು ಕಿತ್ತ ಕಿಡಿಗೇಡಿಗಳು | ಕ್ರಮಕ್ಕೆ ಒತ್ತಾಯ
ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳದಲ್ಲಿ ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ಹಾಕಿರುವ ತಂತಿ ಬೇಲಿಯನ್ನು ಅನಾಗರಿಕರು ಧ್ವಂಸ ಮಾಡಿದ್ದಾರೆ. ಇತ್ತೀಚೆಗೆ ಅ.13ರಂದು ಗ್ರಾ.ಪಂ ವತಿಯಿಂದ ಅಧಿಕಾರಿಗಳು,ಪೊಲೀಸರ ಉಪಸ್ಥಿತಿಯಲ್ಲಿ ದಲಿತ ಮುಖಂಡರ ಸಹಕಾರದೊಂದಿಗೆ ತಂತಿ ಬೇಲಿ ಹಾಕಲಾಗಿತ್ತು.ಇದೀಗ ಐದಕ್ಕಿಂತಲೂ ಹೆಚ್ಚು ಕಂಬ ತಂತಿಗಳಿಗೆ ಹಾನಿ ಮಾಡಿದ್ದಾರೆ
ಇಡಾಳದಲ್ಲಿರುವ ಸರ್ಕಾರಿ ಶಾಲೆಯ ಕೊಠಡಿ ಉದ್ಘಾಟನೆಗೆ ಬಂದಿದ್ದ ಸಚಿವರನ್ನು ಸ್ಥಳೀಯ ಬಿಜೆಪಿ ಮುಖಂಡರು ಸ್ಥಳೀಯ ವ್ಯಕ್ತಿಯೊಬ್ಬರ ಖಾಸಗಿ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿ ಜಾಗದ ವಿಚಾರವಾಗಿಯೂ ಸಚಿವರ ಜೊತೆ ತಂಡವೊಂದು ಸುಧೀರ್ಘ ಚರ್ಚೆಯೂ ನಡೆದಿದೆ ಎನ್ನಲಾಗಿದೆ. ಮಧ್ಯಾಹ್ನದ ಬಳಿಕ ಸ್ಥಳೀಯ ವ್ಯಕ್ತಿಗಳು ಸಾರ್ವಜನಿಕ ಸೊತ್ತನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ. ಬೇಲಿ ಕಿತ್ತು ಹಾಕಿರುವ ಹಿಂದೆ ಕಾಣದ ರಾಜಕೀಯ ಕೈಗಳು ಕೆಲಸ ಮಾಡುತ್ತಿವೆ ರಾಜಕೀಯ ಕುಮ್ಮಕ್ಕಿನಲ್ಲಿಯೇ ಇಂತಹ ಬೆಳವಣಿಗೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ತಂತಿಬೇಲಿಯನ್ನು ಹಾನಿ ಮಾಡಿರುವ ವಿಚಾರ ಅಧಿಕಾರಿಗಳ ಗಮನಕ್ಕೂ ಬಂದಿದ್ದು ಹಾನಿಗೈದವರ ವಿರುದ್ದ ಠಾಣೆಯಲ್ಲಿ ಕೇಸು ದಾಖಲಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಬೇಲಿ ಹಾಕಿದ ಬಳಿಕ ಸ್ಥಳೀಯ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂಘಟನೆ ಬಗ್ಗೆ ಅಧಿಕಾರಿಗಳ ಕುರಿತು ಟೀಕಿಸಿ ಬರೆದಿದ್ದರು. ಈ ವಿಚಾರವಾಗಿ ಕಡಬ ಠಾಣೆಯಲ್ಲೂ ದೂರು ದಾಖಲಾಗಿ ಬಳಿಕ ಪೊಲೀಸರು ಆತನನ್ನು ಮುಚ್ಚಳಿಕೆ ಬರೆದು ಕಳುಹಿಸಿದ್ದರು.
ಗ್ರಾ.ಪಂ ನಿರ್ಲಕ್ಷಕ್ಕೆ ತೆಂಗಿನ ಸಸಿಗಳು ಬಲಿ:ಸರ್ಕಾರಿ ಜಾಗದಲ್ಲಿ ಸ್ಥಳೀಯ ಖಾಸಗಿ ವ್ಯಕ್ತಿಗಳು ಮಾಡಿದ್ದ ಕೃಷಿಯನ್ನು ಬೇಲಿ ಹಾಕುವ ಸಂದರ್ಭದಲ್ಲಿ ಗ್ರಾ.ಪಂ ಅನುಮತಿ ಮೇರೆಗೆ ಸ್ಥಳದಲ್ಲಿದ್ದವರು 50 ಕ್ಕೂ ಅಧಿಕ ತೆಂಗಿನ ಗಿಡಗಳನ್ನು ತೆರವು ಮಾಡಿದ್ದರು. ಮಾರ್ಗದ ಬದಿಯಲ್ಲಿ ಇಟ್ಟಿರುವ ತೆಂಗಿನ ಗಿಡಗಳು ಒಣಗುತ್ತಿವೆ. ಅ..13ರಂದು ತೆರವು ಮಾಡಿರುವ ತೆಂಗಿನ ಗಿಡಗಳನ್ನು ಹಾಗೂ ಪೈಪ್ ಗಳನ್ನು ಗ್ರಾ.ಪಂ ವಶಕ್ಕೆ ಪಡೆಯದೆ ನಿರ್ಲಕ್ಷ ವಹಿಸಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಎರಡು ದಿನದೊಳಗೆ ಬೇಲಿ ಅಳವಡಿಸಲು ದಲಿತ ಮುಖಂಡರ ಆಗ್ರಹ: ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ಹಾಕಿರುವ ಬೇಲಿಯನ್ನು ಕಿತ್ತು ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಎರಡು ದಿನದೊಳಗೆ ಮರು ಬೇಲಿ ನಿರ್ಮಿಸದಿದ್ದಲ್ಲಿ ಗ್ರಾ.ಪಂ ಎದುರು ಧರಣಿ ಮಾಡುವುದಾಗಿ ಬೀಮ ಆರ್ಮಿ ಕಡಬ ಘಟಕದ ನಿಯೋಜಿತ ಮುಖಂಡರು ಎಚ್ಚರಿಸಿದ್ದಾರೆ.