ಖಂಡಾಂತರ ಕ್ಷಿಪಣಿ ಅಗ್ನಿ-5ರ ಪ್ರಯೋಗ ಯಶಸ್ವಿ!! | ಪಾಕಿಸ್ತಾನ ಹಾಗೂ ಚೀನಾಗೆ ಎಚ್ಚರಿಕೆಯ ಸಂದೇಶ ಸಾರಿದ ಭಾರತ
ಭಾರತ ಹಾಗೂ ಚೀನಾದ ಸಂಬಂಧ ಎಂದೋ ಹದಗೆಟ್ಟಿದೆ. ಭಾರತವನ್ನು ಸೋಲಿಸಲು ಚೀನಾ ಎಲ್ಲಾ ಪ್ರಕಾರಗಳಲ್ಲೂ ಶತ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಮಾತ್ರ ಭಾರತ ಎಂದೂ ಹಿಂದೇಟು ಹಾಕುವುದಿಲ್ಲ ಎಂಬುದು ಅಷ್ಟೇ ಸತ್ಯ. ಅಂತಹುದೇ ಸಾಧನೆ ಇದೀಗ ಭಾರತ ಮಾಡಿದೆ. ರಕ್ಷಣಾ ವಲಯದಲ್ಲಿ ಭಾರತ ಅತ್ಯದ್ಭುತ ಸಾಧನೆ ಮಾಡಿದ್ದು, ಅಣ್ವಸ್ತ್ರ ಸಿಡಿತಲೆಯ ಖಂಡಾಂತರ ಕ್ಷಿಪಣಿ ಅಗ್ನಿ-5ರ ಯಶಸ್ವಿ ಪ್ರಯೋಗವನ್ನು ನಡೆಸಿದೆ.
ಭೂಮಿಯಿಂದ ಭೂಮಿಗೆ ಚಿಮ್ಮುವ ಬರೋಬ್ಬರಿ 5 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಕ್ಷಿಪಣಿಯನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪ(ವೀಲರ್)ದಲ್ಲಿ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ. ಮೂರು ಹಂತಗಳ ಘನ ಇಂಧನ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದೆ. ಈ ಪ್ರಯೋಗದ ಯಶಸ್ಸಿನಿಂದ ಪಾಕಿಸ್ತಾನ ಮತ್ತು ಚೀನಾಗೆ ನಡುಕ ಶುರುವಾಗಿದೆ.
ಚೀನಾದ ಯಾವುದೇ ಭಾಗವನ್ನು ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯ ಇದಕ್ಕಿದೆ. ಕಳೆದ ಸೆಪ್ಟೆಂಬರ್ 23 ರಂದು ಇದರ ಯಶಸ್ವಿ ಪ್ರಯೋಗ ನಡೆಸಲಾಗಿತ್ತು. 17.5 ಮೀಟರ್ ಎತ್ತರದ ಈ ಕ್ಷಿಪಣಿ, 50 ಟನ್ ತೂಕ ಇದೆ. 1.5 ಟನ್ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ.
ಅಗ್ನಿ-5 ಎಂದರೇನು?
ಇದು ಖಂಡಾಂತರ ಬ್ಯಾಲಸ್ಟಿಕ್ ಕ್ಷಿಪಣಿ. ಇವುಗಳ ಸಾಮರ್ಥ್ಯ ಸುಮಾರು 5 ಸಾವಿರದಿಂದ 6 ಸಾವಿರ ಕಿ.ಮೀ ವ್ಯಾಪ್ತಿ ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡುಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು.
ಬ್ಯಾಲಸ್ಟಿಕ್ ಕ್ಷಿಪಣಿ ಎಂದರೇನು?
ಬ್ಯಾಲಸ್ಟಿಕ್ ಕ್ಷಿಪಣಿ ಪ್ರಕ್ಷೇಪಗಳ ರೀತಿಗಳಲ್ಲಿ ಚಲಿಸುವ ಕ್ಷಿಪಣಿಗಳು ಇವು ತಮ್ಮದೇ ಆದ ಚೋದನ ಕ್ರಮಗಳಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ, ಮತ್ತೆ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಅತಿ ಹೆಚ್ಚಿನ ತಾಪಮಾನ ಬಿಡುಗಡೆಯಿಂದ ಶತ್ರುಗಳ ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ನಿಗದಿತ ಗುರಿಯನ್ನು ತಲುಪಲು ಜಿಪಿಎಸ್ ಅಳವಡಿಸಲಾಗಿರುತ್ತದೆ.
ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತರ್ಗಾಮಿ ಅಲ್ಲದೇ ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು.
ಈ ಕ್ಷಿಪಣಿಯ ಯಶಸ್ವಿ ಉಡಾವಣೆ ಇಂದ ಭಾರತದ ರಕ್ಷಣಾ ವಲಯಕ್ಕೆ ಆನೆಬಲ ಬಂದಂತಾಗಿದೆ. ಅಲ್ಲದೆ ಶತ್ರು ದೇಶಗಳಾದ ಪಾಕಿಸ್ತಾನ ಹಾಗೂ ಚೀನಾಗೆ ಭಾರತದ ಈ ಸಾಧನೆಯಿಂದ ನಡುಕ ಉಂಟಾಗಿರುವುದಂತೂ ಸತ್ಯ.