ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ತುಟ್ಟಿಭತ್ಯೆ ಶೇ.3 ರಷ್ಟು ಏರಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಿದ್ದಾಯ್ತು, ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಹಬ್ಬದ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ(ಡಿಎ)ಯನ್ನು ಶೇ.3 ರಷ್ಟು ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 2018 ರ ಪರಿಷ್ಕೃತ ವೇತನ ಮಾದರಿಯಲ್ಲಿ ಹಾಲಿ ಇದ್ದ ಮೂಲ ವೇತನದ ಶೇಕಡ 21.50ರಷ್ಟು ತುಟ್ಟಿ ಭತ್ಯೆಯ ಶೇಕಡ 24.50 ರಷ್ಟಕ್ಕೆ ಏರಿಸಲಾಗಿದೆ. ಈ ಏರಿಕೆಯು 2021 ರ ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಉಮಾ ಕೆ. ಆದೇಶಿಸಿದ್ದಾರೆ.
ಮೂರು ತಿಂಗಳ ಹಿಂದೆ ಜುಲೈನಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಶೇ 11.15ರಿಂದ 21.50ಕ್ಕೆ ತುಟ್ಟಿ ಭತ್ಯೆ ಹೆಚ್ಚಿಸಿತ್ತು. ಡಿಎ ಹೆಚ್ಚಳದಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಈ ಪರಿಷ್ಕೃತ ಭತ್ಯೆಯು ಎಲ್ಲಾ ಪೂರ್ಣಕಾಲೀನ ಸರ್ಕಾರಿ ನೌಕರರಿಗೆ, ಜಿಲ್ಲಾ ಪಂಚಾಯತ್ ನೌಕರರಿಗೆ, ರೆಗ್ಯುಲರ್ ಪೇ ಸೈಲ್‌ನಲ್ಲಿರುವ ಚಾರ್ಜಡ್ ನೌಕರರಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಪೂರ್ಣಕಾಲೀನ ನೌಕರರಿಗೆ ಅನ್ವಯಿಸುತ್ತದೆ.
ಇವರೊಂದಿಗೆ, ರಾಜ್ಯ ಸರ್ಕಾರದ ಕನ್ಸಾಲಿಡೇಟೆಡ್ ಫಂಡ್ ನಿಂದ ಪಿಂಚಣಿ ಅಥವಾ ಕೌಟುಂಬಿಕ ಪಿಂಚಣಿ ಪಾವತಿಸಲಾಗುತ್ತಿರುವ ನಿವೃತ್ತ ನೌಕರರು ಅಥವಾ ಕುಟುಂಬದವರಿಗೆ ಕೂಡ ಮೂಲ ಪಿಂಚಣಿಯ ಶೇ. 24.50 ರಷ್ಟು ತುಟ್ಟಿ ಭತ್ಯೆ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ತುಟ್ಟಿಭತ್ಯೆಗಳನ್ನು ಸರ್ಕಾರ ನೌಕರರಿಗೆ ನೀಡಿರಲಿಲ್ಲ. ಆದರೆ ಜುಲೈ 1, 2021 ರ ತುಟ್ಟಿಭತ್ಯೆಯನ್ನು ಇದೀಗ ನೀಡಿ ಸರ್ಕಾರ ನೌಕರರಿಗೆ ಸಹಾಯ ಮಾಡಿದೆ.