5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ,ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಉಡುಪಿ : ನೆರೆಮನೆಗೆ ಆಟವಾಡಲು ಹೋಗಿದ್ದ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಬೀತಾದ ಹಿನ್ನೆಲೆಯಲ್ಲಿ ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎರ್ಮಾಳು ಕಲ್ಪನಾ ಅವರು ತೀರ್ಪು ಪ್ರಕಟಿಸಿದ್ದಾರೆ.
ವೆಂಕಟೇಶ (30) ಶಿಕ್ಷೆಗೊಳಗಾದವ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಘಟನೆ ನಡೆದಿತ್ತು. ವೆಂಕಟೇಶ್ ಮನೆಗೆ ಆಟವಾಡಲೆಂದು ನೊಂದ ಐದು ವರ್ಷದ ಬಾಲಕಿ ತೆರಳಿದ್ದ ವೇಳೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಮನೆಯಲ್ಲಿ ಅಸ್ವಸ್ಥಳಾಗಿದ್ದರಿಂದ ತಾಯಿ ಕಷಾಯ ಮಾಡಿ ಕೊಟ್ಟಿದ್ದರು. ಆದರೆ ಬಾಲಕಿ ವಿಪರೀತವಾಗಿ ಅನಾರೋಗ್ಯಕ್ಕೀಡಾದಾಗ ಕಾರ್ಕಳ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮಗು ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಕಳ ಠಾಣೆಯ ಅಂದಿನ ಉಪನಿರೀಕ್ಷಕ ನಂಜಾ ನಾಯ್ಕ್ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಕಾರ್ಕಳ ಸಿಪಿಐ ಜಾಯ್ ಅಂತೋನಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಒಟ್ಟು 19 ಮಂದಿ ಸಾಕ್ಷಿಗಳ ಪೈಕಿ 12 ಮಂದಿ ವಿಚಾರಣೆ ನಡೆದಿದ್ದು, ವೈದ್ಯಕೀಯ ದಾಖಲೆಗಳು, ನೊಂದ ಬಾಲಕಿ ಹಾಗೂ ಇತರ ಸಾಕ್ಷಿಗಳು ಹೇಳಿದ ಸಾಕ್ಷ್ಯಾಧಾರಗಳು ಅಭಿಯೋಜನೆ ಪರವಾಗಿದ್ದು, ಅಪರಾಧಿ ವೆಂಕಟೇಶನಿಗೆ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ 10 ವರ್ಷ ಜೈಲು, 20 ಸಾವಿರ ರೂ.ದಂಡ (ದಂಡದ ಮೊತ್ತದಲ್ಲಿ 15 ಸಾವಿರ ರೂ. ಸಂತ್ರಸ್ತೆಗೆ, 5 ಸಾವಿರ ರೂ. ಸರಕಾರಕ್ಕೆ), ಮತ್ತು ಸಂತ್ರಸ್ತೆಗೆ 75 ಸಾವಿರ ರೂ. ಪರಿಹಾರ ನೀಡಲು ಸರಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಪ್ರಾಸಿಕ್ಯೂಶನ್ ಪರ ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.