ಪೊಲೀಸ್ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ 14 ಮಂದಿಯನ್ನು ಬಂಧಿಸಿದ ಪೊಲೀಸರು
ಭಾನುವಾರ ರಾಜ್ಯದಲ್ಲೆಡೆ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಯತ್ನಿಸಿದ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಸಿಇಎನ್ ಠಾಣೆ ಹಾಗೂ ಡಿಸಿಐಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ರಾಮತೀರ್ಥ ನಗರದಲ್ಲಿರುವ ಎಸ್.ಎಸ್.ಡೆಕೊರೇಟರ್ ಮತ್ತು ಈವೆಂಟ್ ಪ್ಲಾನರ್ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಕುಳಿತಿದ್ದ ಕೆಲವರು ಮೊಬೈಲ್ ಫೋನ್ ಮತ್ತು ಬ್ಲೂಟೂತ್ ಸಾಧನ ಬಳಸಿ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಬಿಡಿಸಲು ಸಹಾಯ ಮಾಡುತ್ತಿದ್ದುದು ಕಂಡುಬಂದಿತ್ತು. ಸ್ಥಳದಲ್ಲಿದ್ದ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 33 ಮೊಬೈಲ್‌ಗಳು, 9 ಮಾಸ್ಟರ್ ಕಾರ್ಡ್ ಸಾಧನಗಳು, 19 ಬ್ಲೂಟೂತ್ ಉಪಕರಣಗಳು, 3 ಟ್ಯಾಬ್‌ಗಳು, 1 ಲ್ಯಾಪ್‌ಟಾಪ್, 1 ಪ್ರಿಂಟರ್, 1 ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.