ಭಾರತದಲ್ಲಿ ಮುಸ್ಲಿಂರು ಅಲ್ಪಸಂಖ್ಯಾತರಲ್ಲ | ಈ ಹೇಳಿಕೆ ನೀಡಿದ್ದು ಬೇರ್ಯಾರೂ ಅಲ್ಲ, ಇದೇ ಮುಸ್ಲಿಂ ಕಾಂಗ್ರೆಸ್ ನಾಯಕ !
ಬೆಂಗಳೂರು: ಮುಸ್ಲಿಂರ ಕೈಹಿಡಿಯೋದಕ್ಕೆ ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಅದಕ್ಕೆ ಸಂವಿಧಾನ ಒಂದೇ ಸಾಕು ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೆಹಮಾನ್ ಖಾನ್, ನಮ್ಮದು ಜ್ಯಾತ್ಯಾತೀತ ದೇಶ. ಕಾಂಗ್ರೆಸ್ ಕೂಡ ಜ್ಯಾತ್ಯಾತೀತ ಪಕ್ಷ. ಹೀಗಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆ ಇದೆ.ನಾಳೆ ಬಿಜೆಪಿ ಜ್ಯಾತ್ಯಾತೀತ ಆದ್ರೆ ಮುಸ್ಲಿಂಮರು ಬಿಜೆಪಿ ಜೊತೆ ಕೂಡ ಇರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಭಾರತ ದೇಶದಲ್ಲಿ ಮುಸ್ಲಿಂಮರು ಅಲ್ಪಸಂಖ್ಯಾತರಲ್ಲ. ಭಾರತ ದೇಶದಲ್ಲಿ 22 ಕೋಟಿ ಮುಸ್ಲಿಂ ಸಮುದಾಯದವರು ಇರುವಾಗ ಮುಸ್ಲಿಂರು ಅಲ್ಪಸಂಖ್ಯಾತರಾಗುವುದಿಲ್ಲ ಎಂದು ರೆಹಮಾನ್ ಖಾನ್ ಸ್ಪಷ್ಟಪಡಿಸಿದರು.
ಸಿಎಂ ಇಬ್ರಾಹಿಂ ಪಕ್ಷದ ಹಿರಿಯ ನಾಯಕರು. ಅವರನ್ನು ಮೇಲ್ಮನೆ ವಿಪಕ್ಷ ನಾಯಕರನ್ನಾಗಿ ಮಾಡಬೇಕೋ ಬೇಡವೋ ಎಂಬುದಕ್ಕೆ ಸಮಾಜದ ಬಣ್ಣ ಕೊಡುವುದು ಬೇಡ. ಅವರು ಜೆಡಿಎಸ್ ನಿಂದ ಕಾಂಗ್ರೆಸ್ಗೆ ಸೇರಿದಾಗ ಸಚಿವರನ್ನಾಗಿ ಮಾಡಲಾಗಿತ್ತು. ಗುಂಡೂರಾವ್ ಸರ್ಕಾರದಲ್ಲಿ ಅವರು ಮಂತ್ರಿಯಾಗಿದ್ದರು. ನನಗೆ ಅಧಿಕಾರ ನೀಡಿದ್ದೂ ಕೂಡ ಕಾಂಗ್ರೆಸ್ ಪಕ್ಷವೇ. ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಅಧಿಕಾರ ನೀಡಲಿಲ್ಲವೇ ಎಂದು ತಿರುಗೇಟು ನೀಡಿದರು.
ಉಗ್ರಪ್ಪ-ಸಲೀಂ ಡಿ.ಕೆ ಶಿವಕುಮಾರ್ ಕುರಿತ ಸಂಭಾಷಣೆ ವಿಚಾರವಾಗಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರ ನೀಡಿದ್ದಾರೆ. ನಾನಿನ್ನೂ ಅವರ ಉತ್ತರ ನೋಡಿಲ್ಲ. ಶಿಸ್ತು ಸಮಿತಿ ಸಭೆಯಲ್ಲಿ ಅವರ ಉತ್ತರ ನೋಡ್ತೇವೆ. ಸಲೀಂ ಮಾತಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಲೂಸ್ ಟಾಕ್ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಉಗ್ರಪ್ಪ ಮಾತು ಸ್ಪಷ್ಟವಾಗಿಲ್ಲ. ಅವರು ನಗೆಯಾಡಿದ್ದು ಕಾಣಿಸುತ್ತಿತ್ತು. ಅಲ್ಲದೆ ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿದ್ದು ಎಂದಿರುವುದೆನೂ ಮಹಾ ತಪ್ಪಲ್ಲ ಎಂದು ರೆಹಮಾನ್ ಖಾನ್ ಸ್ಪಷ್ಟನೆ ನೀಡಿದರು.
ಮಾಜಿ ಕೇಂದ್ರ ಸಚಿವ ದಿ.ಜಾಫರ್ ಷರೀಫ್ ಮೊಮ್ಮಗನನ್ನ ಸೋಲಿಸಿದ್ದು ಸಿದ್ದರಾಮಯ್ಯ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೆಹಮಾನ್ ಖಾನ್, ಜಾಫರ್ ಷರೀಫ್ ಮೊಮ್ಮಗನಿಗೆ ಜೆಡಿಎಸ್ನಿಂದ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಕುಮಾರಸ್ವಾಮಿ ಹೇಳಿಕೆ ಎಲ್ಲವೂ ಸತ್ಯವಲ್ಲ. ಹಾಗಿದಿದ್ದರೆ ಜಾಫರ್ ಷರೀಫ್ ಮೊಮ್ಮಗನಿಗೆ ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಅವರು ಏಕೆ ಹಾಗೆ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.