ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರಕುಮಾರ್ ಅವರು ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್’ಗೆ ಆಯ್ಕೆಗೊಂಡಿದ್ದಾರೆ.
ಹೊಸದಿಲ್ಲಿಯ ಇನ್ಸಿಟ್ಯೂಟ್ ಅಫ್ ಎಕನಾಮಿಕ್ ಸ್ಟಡೀಸ್ ಸಂಸ್ಥೆ ಶ್ರೀಲಂಕಾದ ಕೊಲಂಬೊ ಗಾಲೇ ಫೇಸ್ ಹೋಟೆಲ್ ಆಡಿಟೋರಿಯಂನಲ್ಲಿ ಅ.28ರಂದು ಆಯೋಜಿಸಿರುವ ಇಂಡೋ – ಶ್ರೀಲಂಕಾ ಎಕನಾಮಿಕ್ ಕೋ ಆಪರೇಶನ್ ಕಾನ್ನ ರೆನ್ಸ್’ನಲ್ಲಿ ಡಾ.ಎಂ.ಎನ್.ಆರ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಎಸ್‌ಸಿಡಿಸಿಸಿಗೆ ಘನತೆ ತಂದವರು
ಸಹಕಾರಿ ರಂಗದಲ್ಲಿ ಹೊಸ ಹೊಸ ಅವಿಷ್ಕಾರದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿಗೆ ಘನತೆ ತಂದುಕೊಟ್ಟ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ತನ್ನ ಸಮರ್ಥ ನಾಯಕತ್ವದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್‌ನ್ನು 27 ವರ್ಷಗಳಿಂದ ಮುನ್ನಡೆಸುತ್ತಿರುವ ಇವರು, ಈ ಬ್ಯಾಂಕ್ ನ್ನು ಜನಸ್ನೇಹಿ ಬ್ಯಾಂಕನ್ನಾಗಿ ರೂಪಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿರುವ ಇವರು, ಅಧ್ಯಕ್ಷರಾದ ಬಳಿಕ ಎಸ್ ಸಿಡಿಸಿಸಿ ಬ್ಯಾಂಕಿಗೆ 19 ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 18 ಬಾರಿ ನಬಾರ್ಡ್ ಪ್ರಶಸ್ತಿ, 2 ಬಾರಿ ಬ್ಯಾಂಕಿಂಗ್ ಪ್ರೋಂಟಿಯರ್ಸ್ ಪ್ರಶಸ್ತಿ ಹಾಗೂ ಈಚೆಗೆ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ.
ಹಲವು ಪ್ರಶಸ್ತಿಗಳ ಗರಿ
ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಡಾ. ಎನ್.ಎಂ. ರಾಜೇಂದ್ರ ಕುಮಾರ್ ಅವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಇವರಿಗೆ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಮುಖ್ಯವಾಗಿ ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರಕಾರ ‘ಸಹಕಾರ ರತ್ನ’ ಪ್ರಶಸ್ತಿಯನ್ನು ನೀಡಿದೆ. ಮಾತ್ರವಲ್ಲ ಸಹಕಾರ ವಿಶ್ವ ಬಂಧುಶ್ರೀ, ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ, ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ, ಬೆಸ್ಟ್ ಚೇರ್‌ಮೆನ್ ನ್ಯಾಷನಲ್ ಎವಾರ್ಡ್, ನ್ಯಾಷನಲ್ ಎಕ್ಸ್ ಲೆನ್ಸ್‌ವಾರ್ಡ್, ಔಟ್ ಸೈಂಡಿಂಗ್ ಗ್ಲೋಬಲ್ ಲೀಡರ್ ಶಿಪ್ ಎವಾರ್ಡ್, ಬಹುಪ್ರಭಾವಶಾಲಿ ಸಹಕಾರ ನಾಯಕ ಪ್ರಶಸ್ತಿ ಹೀಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಇವರು ಪುರಸ್ಕೃತರಾಗಿದ್ದಾರೆ.