ಕೊರೋನಾ ಸೋಂಕಿನ ಪರಿಣಾಮದ ಕುರಿತು ಹೊರಬಿದ್ದಿದೆ ಸ್ಫೋಟಕ ಮಾಹಿತಿ | ಕೋವಿಡ್ ನಿಂದ ಭಾರತೀಯರ ಆಯಸ್ಸು ಎರಡು ವರ್ಷ ಇಳಿಕೆ!!
ಕೊರೋನಾ ಸೋಂಕಿನ ಪರಿಣಾಮದ ಕುರಿತು ಒಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕೊರೋನಾ ಮಹಾಮಾರಿ ಸೋಂಕಿನಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಸರಾಸರಿ 2 ವರ್ಷ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.
ಮುಂಬೈನ ಅಂತರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರದ ಸಂಸ್ಥೆ(ಐಐಪಿಎಸ್) ವಿಜ್ಞಾನಿಗಳು, ದೇಶದಲ್ಲಾಗುತ್ತಿರುವ ಸಾವಿನ ಪ್ರಮಾಣಕ್ಕೆ ಕೋವಿಡ್ ಹೇಗೆ ಪರೋಕ್ಷವಾಗಿ ಕಾರಣವಾಗಿದೆ ಎಂಬ ಕುರಿತಾಗಿ ಅಂಕಿ ಸಂಖ್ಯೆಗಳ ವಿಶ್ಲೇಷಣೆ ನಡೆಸಿದ್ದಾರೆ.
ವರದಿಯು ಬಿಎಂಸಿ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಈ ಪ್ರಕಾರ ದೇಶದ ಮಹಿಳೆಯರು ಮತ್ತು ಪುರುಷರು ಆಯಸ್ಸು ತಲಾ 2 ವರ್ಷಗಳಷ್ಟು ಕಡಿತಗೊಂಡಿದೆ. 2019ರಲ್ಲಿ ಸರಾಸರಿ 69.5 ರಷ್ಟಿದ್ದ ಪುರುಷರ ಜೀವಿತಾವಧಿಯು ಸರಾಸರಿ 67.5ಕ್ಕೆ ಕುಸಿದಿದೆ. ಅದೇ ರೀತಿ ಮಹಿಳೆಯರು ಸರಾಸರಿ ಆಯಸ್ಸು 72 ವರ್ಷದಿಂದ 69.8ಕ್ಕೆ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೋನಾ ಮಹಾಮಾರಿಯಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಕೊರೋನಾ ವಿರುದ್ಧವಾಗಿ ಹೋರಾಡಲು ಭಾರತದಲ್ಲಿಯೇ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ಕಂಡುಹಿಡಿಯಲಾಯಿತು. ಭಾರತ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆಯ ಸಾಧನೆ ಮಾಡಿದೆ. ಈ ಮೂಲಕ ಚೀನಾ ನಂತರ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ, ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದಿದ್ದಾರೆ.
ಆದರೂ ಬಹಿರಂಗಗೊಂಡಿರುವ ಈ ವರದಿಯು ಭಾರತೀಯರಿಗೆ ಶಾಕ್ ನೀಡಿದ್ದಂತೂ ನಿಜ. ಸೋಂಕಿನ ಪರಿಣಾಮ ಈ ರೀತಿ ಇರಬಹುದೆಂದು ಯಾರೂ ಊಹಿಸಿರಲಿಕ್ಕಿಲ್ಲ.