ನಿಧಿಯಾಸೆಗಾಗಿ ನಾಗಬನದ ಪಕ್ಕದ ಹುತ್ತವನ್ನು ಕೊರೆದ ದುಷ್ಕರ್ಮಿಗಳು | ಹುತ್ತ ಕೊರೆದು ನಿಧಿಗೆ ಜಾಲಾಡಿದ ತಂಡ
ಮಂಗಳೂರು : ನಿಧಿ ಇರಬಹುದು ಎಂದು ಶಂಕಿಸಿದ ದುಷ್ಕರ್ಮಿಗಳ ತಂಡವೊಂದು ನಾಗಬನದ ಪಕ್ಕದ ದೊಡ್ಡ ಗಾತ್ರದ ಹುತ್ತ ವೊಂದನ್ನು ಕೊರೆದು ನಿಧಿ ಶೋಧನೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಇರಾ ಬಪ್ಪರ ಕಂಬಳದ ನಾಗಬನದ ಪಕ್ಕದಲ್ಲಿ ಹುತ್ತವೊಂದಿದ್ದು ಅದನ್ನು ಕೊರೆದು ನಿಧಿಗಾಗಿ ಜಾಲಾಡಿದ್ದಾರೆ.
ಈ ನಾಗಬನವು ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನ ಎಂದು ಹೇಳಲಾಗುತ್ತಿದ್ದು, ಇಲ್ಲಿ ನಾಗನಕಟ್ಟೆಯನ್ನೂ ಕಟ್ಟಲಾಗಿದೆ. ಆದರೆ ದುಷ್ಕರ್ಮಿಗಳು ಹುತ್ತದ ಬಳಿ ಬಿಲ ಕೊರೆದು ಶೋಧನೆ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದುಷ್ಕರ್ಮಿಗಳ ತಂಡ ಈಗಾಗಲೇ ಕೊರೆದಿರುವ ಹುತ್ತದ ಬಳಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದಿಂದಲೂ ಹಿರಿಯರು ಹೇಳುತ್ತಿದ್ದರು ಎನ್ನಲಾಗಿದೆ. ಇದರ ದುರಾಸೆಯಿಂದ ನಿಧಿಗಾಗಿ ಹುಡಿಕಾಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.