ಬಿರಿಯಾನಿ ಚಪ್ಪರಿಸಲು ಹೋಗಿ 2 ಲಕ್ಷ ರೂ. ನಾಮ ಹಾಕಿಕೊಂಡ ಆಟೋ ಚಾಲಕ!!
ಬಿರಿಯಾನಿ ಎಂದರೆ ಬಹಳಷ್ಟು ಮಂದಿಗೆ ಪ್ರಿಯ ಆಹಾರ. ಮಾಂಸಾಹಾರದಲ್ಲಿ ಎಲ್ಲ ಖಾದ್ಯಗಳದ್ದೂ ಒಂದು ತೂಕವಾದರೆ, ಬಿರಿಯಾನಿಯದ್ದೇ ಒಂದು ತೂಕ. ಹೀಗಿರುವಾಗ ಬಿರಿಯಾನಿ ಚಪ್ಪರಿಸಲು ಹೋದ ಆಟೋ ಚಾಲಕರೊಬ್ಬರು 2 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಆಟೋ ಚಾಲಕರೊಬ್ಬರು ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಬೈಕ್‍ನಲ್ಲಿ ಇಟ್ಟು ದಾರಿ ಮಧ್ಯೆ ಬಿರಿಯಾನಿ ತಿನ್ನಲು ಹೋಗಿ ವಾಪಸ್ ಬರುವಾಗ ಬೈಕ್‍ನಲ್ಲಿ ಇಟ್ಟಿದ್ದ ಹಣ ಕಳವಾಗಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಆಟೋ ಚಾಲಕರಾಗಿರುವ ಹನುಮಂತರಾಯ ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದರು. ಬಳಿಕ ಕಟ್ಟಬೇಕಾದ ಅನಿವಾರ್ಯತೆಯಿಂದ ತಮ್ಮಲ್ಲಿದ್ದ ಚಿನ್ನ ಅಡವಿಟ್ಟು, 2 ಲಕ್ಷ ಹಣ ಹೊಂದಿಸಿ ಅದನ್ನು ಬೈಕ್‍ನ ಸೈಡ್ ಲಾಕರ್‌ನಲ್ಲಿ ಇಟ್ಟುಕೊಂಡು ಅವರ ಬಾಮೈದನೊಂದಿಗೆ ಮನೆಗೆ ತೆರಳುತ್ತಿದ್ದರು. ಈ ನಡುವೆ ದಾರಿ ಮಧ್ಯೆ ಬಿರಿಯಾನಿ ತಿನ್ನಲೆಂದು ಬೈಕ್‍ನಿಂದ ಇಬ್ಬರು ಇಳಿದು ಹೋಗಿದ್ದಾರೆ. ಈ ವೇಳೆ ಬೈಕ್ ಲಾಕರ್‌ನಲ್ಲಿದ್ದ ಹಣವನ್ನು ಕೂಡ ಅಲ್ಲೇ ಬಿಟ್ಟು ಹೋಗಿದ್ದಾರೆ. ನಂತರ ಬಿರಿಯಾನಿ ತಿಂದು ಬರುವಷ್ಟರಲ್ಲಿ 2 ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ.
ಬಿರಿಯಾನಿ ತಿಂದು ಹನುಮಂತರಾಯ ಬೈಕ್ ಬಳಿ ಬಂದು ಹಣವನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕೂಡಲೇ ಪಕ್ಕದಲ್ಲಿದ್ದ ಅಂಗಡಿಯೊಂದರ ಸಿಸಿಟಿವಿ ಪರಿಶೀಲಿಸಿದಾಗ ಸಾಮಾನ್ಯರಂತೆ ಓಡಾಡಿ, ಹಣ ಕಳ್ಳತನ ಮಾಡಿದ ದೃಶ್ಯ ಸೆರೆಯಾಗಿದೆ. ಈ ಘಟನೆ ಕೆಳದಿನಗಳ ಹಿಂದೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.