ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ಶೇ.3 ಡಿಎ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಶೇ. 3 ತುಟ್ಟಿಭತ್ಯೆ (ಡಿಎ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇದು ಜುಲೈ 1ರಿಂದ ಅನ್ವಯ ಆಗಲಿದ್ದು, ಡಿಎ ಪ್ರಮಾಣ ಶೇ. 28ರಿಂದ ಶೇ. 31ಕ್ಕೆ ಏರಿಕೆ ಆಗಲಿದೆ. ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ದೊರೆಯಲಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಅನುಗುಣವಾಗಿ ಈ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಆರ್ಥಿಕ ಅನುಕೂಲ ದೊರೆಯಲಿದೆ. ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 9,488.70 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.