ಬೆಳ್ತಂಗಡಿಯ ಯುವತಿ ಸೇರಿ ಇಬ್ಬರು ನಕ್ಸಲರ ಬಂಧನಕ್ಕೆ ವಾರಂಟ್ | ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ!!
ಮಂಗಳೂರು : ಕೇರಳದ ವೆಲ್ಲಮುಂಡ ನಕ್ಸಲ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ರಾಜ್ಯದ ಇಬ್ಬರು ನಕ್ಸಲರ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಕೊಟ್ಯಂತಡ್ಕದ ಗೀತಾ ಅಲಿಯಾಸ್ ಸುಂದರಿ ಅಲಿಯ ಸಿಂಧು ಹಾಗೂ ರಾಯಚೂರು ಜಿಲ್ಲೆಯ ಆರೋಳಿ ಗ್ರಾಮ ಅಂಬೇಡ್ಕರ್ ಕಾಲನಿಯ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಹೇಶ್ ಅಲಿಯಾಸ್ ಮಾರಪ್ಪ ಎಂಬ ಇಬ್ಬರು ಈ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದಾರೆ.
ಇವರನ್ನು ಪತ್ತೆ ಮಾಡಿದರೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಕೆಲ ವರ್ಷಗಳ ಹಿಂದೆ ಪ್ರಕಟಿಸಲಾಗಿತ್ತು. ಪತ್ತೆಯಾಗದ ಹಿನ್ನೆಲೆಯಲ್ಲಿ ಈಗ ಬಹುಮಾನದ ಮೊತ್ತವನ್ನು ಏರಿಕೆ ಮಾಡಿ ಮತ್ತೆ ವಾರಂಟ್‌ನೊಂದಿಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ಮಾಹಿತಿ ದೊರೆತಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ, ಹೌಸ್ ನಂಬರ್ 28/443, ಗಿರಿನಗರ ಕಡವಂತರ, ಕೊಚ್ಚಿ, ಕೇರಳ 682020. ಮೊಬೈಲ್ 9477715294, ದೂರವಾಣಿ: 0484-2349344 ಸಂಪರ್ಕಿಸುವಂತೆ ಕೋರಲಾಗಿದೆ. ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುವುದು ಎಂದೂ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ:
2014ರ ಏಪ್ರಿಲ್ 24ರಂದು ಕೇರಳದ ವಯನಾಡು ಜಿಲ್ಲೆಯ ವೆಲ್ಲಮುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರಾದ ರೂಪೇಶ್, ಅನು, ಜಯಣ್ಣ, ಕನ್ಯಾ ಮತ್ತು ಸುಂದರಿ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿ ಪೊಲೀಸ್ ಅಧಿಕಾರಿ ಪ್ರಮೋದ್ ಎಂಬುವರ ಮನೆಯ ಜೀವ ಬೆದರಿಕೆ ಒಡ್ಡಿ, ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದರು. ಅಲ್ಲದೆ ಅವರ ಬೈಕ್‌ಗೆ ಬೆಂಕಿ ಹಚ್ಚಿ ರಾಜ್ಯದ ವಿರುದ್ಧ ಕ್ರಾಂತಿ ನಡೆಸುವ ಬೆದರಿಕೆ ಒಡ್ಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 2016ರಲ್ಲೇ ಕೇರಳ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.