ಮಂಗಳೂರು | ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಟಿಪ್ಪರ್ ಹತ್ತಿಸಿ ಕೊಲೆಗೆ ಯತ್ನಿಸಿದ ಮರಳು ದಂಧೆಕೋರರು

Share the Article

ನೇತ್ರಾವತಿ ನದಿಯ ಮರಳು ಅಡ್ಡೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮರಳು ದಂಧೆಕೋರರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮೇಲೆಯೇ ಟಿಪ್ಪರ್ ಹಾಗೂ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಫರಂಗಿಪೇಟೆಯಲ್ಲಿ ನಡೆದಿದೆ.

ಫರಂಗಿಪೇಟೆ ಹೊರಠಾಣೆಯ ಚೆಕ್‌ಪೋಸ್ಟ್‌ನಲ್ಲಿ ಗ್ರಾಮಾಂತರ ಠಾಣೆಯ ಕಾನ್‌ಸ್ಟೇಬಲ್ ಗಳಾದ ಶೇಖರ್ ಚೌಗಾಲಾ ಹಾಗೂ ರಾಧಾಕೃಷ್ಣ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು. ಮುಂಜಾನೆ 2.20ರ ವೇಳೆಗೆ ಮಂಗಳೂರು ಕಡೆಯಿಂದ ಬಂದ ಟಿಪ್ಪರ್ ಲಾರಿಯೊಂದು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಕಾನ್‌ಸ್ಟೇಬಲ್ ಶೇಖರ್ ಚೌಗಾಲಾ ಮೇಲೆ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಆಗ ಕರ್ತವ್ಯದಲ್ಲಿದ್ದ ಹೋಮ್‌ಗಾರ್ಡ್, ಶೇಖರ್ ಅವರನ್ನು ಬದಿಗೆ ಸರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಿಪ್ಪರ್ ಚೆಕ್‌ಪೋಸ್ಟ್‌ನ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಗಾಡಿ ಸಹಿತ ಚಾಲಕ ಪರಾರಿಯಾಗಿದ್ದಾನೆ. ಈ ಟಿಪ್ಪರನ್ನು ಹಿಂಬಾಲಿಸಿ ಕಾರೊಂದು ಬಂದಿದ್ದು, ಅದು ಕೂಡ ಸ್ಥಳದಲ್ಲಿದ್ದ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಮುಂದಕ್ಕೆ ಸಾಗಿದ್ದು, ಈ ವೇಳೆ ಕಾರು ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ದೂರಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಂಗಳೂರು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಟಿಪ್ಪರ್ ಚಾಲಕ ಅಬ್ದುಲ್ ಇಸಾಕ್, ಕಾರು ಚಾಲಕ ಮೊಯ್ದಿನ್ ಅಪ್ಸರ್ ಬಂಧಿತರು. ಟಿಪ್ಪರ್ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Leave A Reply