ಅಭಿನಂದನೆಗಳು ಇಂಡಿಯಾ | ‘ಶತಕೋಟಿ ಲಸಿಕೆ’ ಸಾಧನೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಭಾರತ | ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು!!
ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಭಾರತ, ಲಸಿಕೆ ನೀಡಿಕೆಯಲ್ಲಿ ನೂರು ಕೋಟಿ ಡೋಸ್ ಪೂರ್ಣಗೊಳಿಸಿದ್ದು, ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಇಂದು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ಇಂದಿಗೆ 100 ಕೋಟಿ (1 ಬಿಲಿಯನ್) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ಅಭಿನಂದನೆಗಳು ಇಂಡಿಯಾ. ಇದು ದೂರದೃಷ್ಟಿ ಹೊಂದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಫಲಿತಾಂಶ ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ದೇಶದಾದ್ಯಂತ ಎಲ್ಲ ರೈಲುಗಳು, ವಿಮಾನಗಳು ಮತ್ತು ಹಡಗುಗಳಲ್ಲಿ ‘ಶತಕೋಟಿ ಡೋಸ್’ ಬಗ್ಗೆ ಘೋಷಣೆ ಮಾಡಲಾಗುತ್ತದೆ.
ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾದ ಒಂಬತ್ತೇ ತಿಂಗಳಲ್ಲಿ ದೇಶ ಈ ಮಹಾನ್ ಸಾಧನೆಯನ್ನು ಪೂರ್ಣಗೊಳಿಸಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ 99.4 ಕೋಟಿ ಡೋಸ್ ಚುಚ್ಚುಮದ್ದು ಹಾಕಲಾಗಿದ್ದು, ಇಂದು ಶತಕೋಟಿ ಪೂರೈಸಿದೆ.
ಶತ ಕೋಟಿ ಡೋಸ್ ದಾಟಿದ 2ನೇ ದೇಶವಾಗಿ ಭಾರತ ದಾಖಲೆ ಬರೆಯಲಿದೆ. ಚೀನಾ ಜೂನ್ ನಲ್ಲೇ ಈ ಸಾಧನೆಗೈದಿದೆ. ಎರಡೂ ದೇಶಗಳು ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳಾಗಿವೆ.
ಜನವರಿ 16ರಂದು ಮೊದಲ ವ್ಯಾಕ್ಸಿನ್ ನೀಡಲಾಗಿತ್ತು. ಆ ಬಳಿಕ 100 ಕೋಟಿ ಲಸಿಕೆ ಪಡೆಯಲು 277 ದಿನ ಪಡೆದುಕೊಂಡಿದೆ. ದೇಶದ ಶೇ. 50ರಷ್ಟು ಮಂದಿಗೆ ಸಿಂಗಲ್ ಡೋಸ್ ಲಸಿಕೆ ಸಿಕ್ಕಿದರೆ ಶೇ.21ರಷ್ಟು ಮಂದಿಗೆ ಡಬಲ್ ಡೋಸ್ ಪೂರ್ಣವಾಗಿದೆ. 58,645 ಸರ್ಕಾರಿ, 2,019 ಖಾಸಗಿ ಕೇಂದ್ರ ಸೇರಿ ಒಟ್ಟು 60,664 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ.