ಬಡಗನ್ನೂರು : ಅತ್ಯಾಚಾರ ಪ್ರಕರಣದ ಆರೋಪಿ ನಾರಾಯಣ ರೈ ಬಂಧಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ
ಪುತ್ತೂರು: ತಾಲೂಕಿನ ಬಡಗನ್ನೂರು ಎಂಬಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ವೈದ್ಯಾಧಿಕಾರಿಗಳು ನೈಜತೆಯನ್ನು ಮರೆಮಾಚಿದ್ದು, ಪ್ರಕರಣದ ನೈಜ ಆರೋಪಿಯನ್ನು ಈತನಕ ಬಂಧಿಸಿಲ್ಲ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಅವರು ಎಚ್ಚರಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿ ಈತನಕ ಯಾವುದೇ ಸ್ಪಂಧನೆ ದೊರಕಿಲ್ಲ. ಇಲ್ಲಿನ ಶಾಸಕರು,ಕೂಡಾ ಈ ಬಗ್ಗೆ ಯಾವುದೇ ಪರಿಶೀಲನೆ ನಡೆಸಿಲ್ಲ. ಅಲ್ಲದೆ ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷಗಳು ಮಾತನಾಡುತ್ತಿಲ್ಲ. ಪ್ರಕರಣದ ಆರೋಪಿಯಾಗಿರುವ ನಾರಾಯಣ ರೈ ಎಂಬಾತ ಆರೆಸೆಸ್ಟ್ ಹಾಗೂ ಬಿಜೆಪಿ ಮುಖಂಡರಾಗಿರುವ ಕಾರಣ ಪ್ರಕರಣವನ್ನು ತಿರುಚಿ ಸಂತ್ರಸ್ತ ಬಾಲಕಿಯ ಸಹೋದರನನ್ನೇ ಆರೋಪಿ ಎಂದು ಬಿಂಬಿಸಿ ಬಂಧಿಸಲಾಗಿದೆ.
ಆರೆಸೆಸ್ಟ್ ಮತ್ತು ಬಿಜೆಪಿಗೆ ನೈಜ ಜನಪರವಾದ ಕಾಳಜಿಯಿದ್ದಲ್ಲಿ ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಸಂತ್ರಸ್ತೆಯ ಜಾತಿಯನ್ನು ನೋಡದೆ ಆಕೆಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿ ಈ ಪ್ರಕರಣವು ಅತ್ಯಂತ ನಾಚಿಗೆಗೇಡಿನ ವಿಚಾರವಾಗಿದ್ದು, ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಕೋಮು ವಿಚಾರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸುತ್ತಿರುವ ಪರಿವಾರ ಸಂಘಟನೆಗಳು ಈ ವಿಚಾರದಲ್ಲಿ ಮಾತ್ರ ಚಕಾರವೆತ್ತಿಲ್ಲ. ದಲಿತರನ್ನು ಓಟು ಬ್ಯಾಂಕ್‌ಗಳಾಗಿ ಕಾಣುತ್ತಿರುವವರು ಅವರ ನೋವಿಗೆ ಸ್ಪಂಧನೆ ನೀಡುತ್ತಿಲ್ಲ. ಈ ಪ್ರಕರಣದಲ್ಲಿ ನೈಜ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು. ವಾರದ ಒಳಗಾಗಿ ಆರೋಪಿಯ ಬಂಧನವಾಗದಿ ದ್ದಲ್ಲಿ ಡಿವೈಎಸ್‌ಪಿ ಕಚೇರಿ ಮುಂಭಾಗದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಕೋಟ್ಯಾನ್, ಜಯಪ್ರಕಾಶ್ ಕನ್ಯಾಡಿ, ಅಶೋಕ್ ಕೊಂಚಾಡಿ, ಸೀತಾರಾಮ ಕೊಂಚಾಡಿ ಉಪಸ್ಥಿತರಿದ್ದರು.