ನೀವು ಕೂಡ ಕಾಫಿ ಪ್ರಿಯರಾ?? ರಿಲ್ಯಾಕ್ಸ್ ಆಗಲು ಒಂದು ಕಪ್ ಕಾಫಿ ಹೀರುವ ಅಭ್ಯಾಸವಿದೆಯೇ??| ಆದ್ರೆ ನಿಮ್ಮ ಈ ಬಿಂದಾಸ್ ಕಾಫಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ
ಚುಮುಚುಮು ಚಳಿಯಲ್ಲಿ ಮೊದಲಿಗೆ ನೆನಪಾಗುವುದೇ ಕಾಫಿ. ಕಾಫಿಯ ಪರಿಮಳ ಮತ್ತು ಅದರ ರುಚಿ ಮತ್ತೆ ಮತ್ತೆ ಸವಿಯಬೇಕು ಎನ್ನುವ ಬಯಕೆಯನ್ನು ಹುಟ್ಟಿಸುವುದು ಸಹಜ. ಹಾಗಾಗಿ ಒಂದು ಸಣ್ಣ ವಿರಾಮ ಹೊಂದುವಾಗ ಅಥವಾ ಮನಸ್ಸನ್ನು ಚೈತನ್ಯ ಗೊಳಿಸಲು ಕೆಲವರು ಪದೇ ಪದೇ ಕಾಫಿಯನ್ನು ಕುಡಿಯುತ್ತಲೇ ಇರುತ್ತಾರೆ. ಕಾಫಿ ಕುಡಿಯುವ ಹವ್ಯಾಸ ಇರುವವರಿಗೆ ಅದು ಚಟವಾಗಿ ತಿರುಗುವ ಸಾಧ್ಯತೆಯೂ ಉಂಟು. ಅಂತಹವರಿಗೆ ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಒಂದು ಕಪ್ ಕಾಫಿ ಕುಡಿಯುವ ಬಯಕೆ ಉಂಟಾಗುತ್ತದೆ.
ನೀವು ಸಹ ಕಾಫಿ ಪ್ರಿಯರಾಗಿದ್ದರೆ ಮತ್ತು ನಿತ್ಯವೂ ಕಾಫಿ ಕುಡಿಯಲು ಒಂದು ಕಾರಣವನ್ನು ಹುಡುಕುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ. ಅತಿಯಾಗಿ ಮತ್ತು ತಪ್ಪಾದ ಸಮಯದಲ್ಲಿ ಕಾಫಿ ಸೇವಿಸುವುದರಿಂದ ನಿಮ್ಮ ದೇಹದ ಶಕ್ತಿ ಕಡಿಮೆ ಆಗಬಹುದು ಮತ್ತು ನಿಮ್ಮನ್ನು ಅಧಿಕ ರಕ್ತದೊತ್ತಡದ ರೋಗಿಯನ್ನಾಗಿ ಮಾಡಬಹುದು. ಏಕೆಂದರೆ ಕಾಫಿಯಲ್ಲಿ ಕೆಫೆನ್ ಅಂಶ ಜಾಸ್ತಿ ಇರುತ್ತದೆ.
ನೀವು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯಲು ಬಯಸಿದರೆ, ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಬೆಳಿಗ್ಗೆ 8 ರಿಂದ 9 ರ ಸುಮಾರಿಗೆ ಉತ್ತುಂಗದಲ್ಲಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಸಮಯದಲ್ಲಿ ಕಾಫಿ ಕುಡಿಯುವುದರಿಂದ ವ್ಯಕ್ತಿಯ ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬಹುದು.
ಪೌಷ್ಟಿಕ ತಜ್ಞರ ಪ್ರಕಾರ, ಹಾಸಿಗೆ ಬಿಟ್ಟ ತಕ್ಷಣ ಅರ್ಥಾತ್ ಮಲಗಿ ಎದ್ದ ಕೂಡಲೇ ಕಾಫಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು. ಏಕೆಂದರೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಈ ಸಮಯದಲ್ಲಿ ದೇಹದಲ್ಲಿ ಉತ್ತುಂಗದಲ್ಲಿರುತ್ತದೆ. ಕಾಫಿಯಲ್ಲಿರುವ ಕೆಫೀನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಕಾರ್ಟಿಸೋಲ್ ಮಟ್ಟಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹಾಳುಮಾಡುತ್ತದೆ ಮತ್ತು ಅವರನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಕಾರ್ಟಿಸೋಲ್ ಮಟ್ಟಗಳು ಕಡಿಮೆಯಾದಾಗ ಕಾಫಿ ಕುಡಿಯಲು ಉತ್ತಮ ಸಮಯ ಮಧ್ಯಾಹ್ನ 1 ಗಂಟೆಯಿಂದ ತಡರಾತ್ರಿವರೆಗೆ. ನೀವು 12 ಗಂಟೆಯಿಂದ 1 ಗಂಟೆಯವರೆಗೆ ಕಾಫಿ ಕುಡಿದರೆ, ಈ ಸಮಯದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಅಧಿಕವಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.
ನೀವು ಕೂಡ ಆಹಾರದೊಂದಿಗೆ ಅಥವಾ ಊಟ, ತಿಂಡಿ ಸೇವಿಸಿದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ಕೂಡಲೇ ನಿಮ್ಮ ಈ ಅಭ್ಯಾಸವನ್ನು ಬಿಟ್ಟು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ನಿಮ್ಮ ಈ ಅಭ್ಯಾಸವು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
ಆಹಾರ ಸೇವನೆ ಮತ್ತು ಕಾಫಿ ಕುಡಿಯುವುದರ ನಡುವೆ ಕನಿಷ್ಠ ಒಂದು ಗಂಟೆ ಆದರೂ ಅಂತರ ಇರಬೇಕು. ನೀವು ರಕ್ತಹೀನತೆ ಸಮಸ್ಯೆ ಹೊಂದಿದ್ದರೆ ಈ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮತ್ತೊಂದೆಡೆ, ನೀವು ರಾತ್ರಿ ವೇಳೆ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದರೆ ಇದರಿಂದ ನಿಮ್ಮ ನಿದ್ರೆಗೆ ಭಂಗವಾಗಬಹುದು ಎಂದೂ ಕೂಡ ಹೇಳಲಾಗುತ್ತದೆ.
ಕಾಫಿ ಕುಡಿಯಲು ಯಾವ ಸಮಯ ಉತ್ತಮ
ನೀವು ಬೆಳಿಗ್ಗೆ 10 ರಿಂದ 11:30 ರವರೆಗೆ ಕಾಫಿ ಕುಡಿಯುತ್ತಿದ್ದರೆ, ಕಾಫಿ ಕುಡಿಯಲು ಇದು ಸೂಕ್ತ ಮತ್ತು ಸುರಕ್ಷಿತ ಸಮಯ ಎಂದು ವೈದ್ಯರು ಸೂಚಿಸಿದ್ದಾರೆ. ಈ ಸಮಯದಲ್ಲಿ ಕಾರ್ಟಿಸೋಲ್ ಮಟ್ಟ ಕಡಿಮೆಯಿರುವುದರಿಂದ ಈ ಸಮಯವು ಕಾಫಿ ಸೇವನೆಗೆ ಅತ್ಯುತ್ತಮ ಸಮಯವಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ, ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆಯಾಗಲು ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ.
ದಿನಕ್ಕೆ ಎಷ್ಟು ಕಫ್ ಕಾಫಿ ಉತ್ತಮ?
ದಿನಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಕಾಫಿ ಸೇವನೆಯು ದೇಹವನ್ನು ಆರೋಗ್ಯವಾಗಿ ಇಡುವುದು. ಅದು ದೇಹಕ್ಕೆ ಅಗತ್ಯವಾದ ಪೋಷಣೆ ಹಾಗೂ ಆರೋಗ್ಯವನ್ನು ನೀಡುವುದು. ಒಂದು ಕಪ್‍ನಲ್ಲಿ 40 ಮಿಲಿ ಗ್ರಾಂ ನಿಂದ 400 ಮಿಲಿ.ಗ್ರಾಂ ಗಳವರೆಗೆ ಹೊಂದಬಹುದು. ಬಹುತೇಕ ಜನರು ಸರಾಸರಿ ಕೆಫೆನ್‍ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ದಿನಕ್ಕೆ ಸೂಕ್ತ ಪ್ರಮಾಣಕ್ಕಿಂತ ಅಧಿಕ ಕಾಫಿಯನ್ನು ಕುಡಿದರೆ ಅದು ಅಪಾಯಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ.