ಶಬರಿಮಲೆ ಭಕ್ತರಿಗೆ ಪಂಪಾ ನದಿಗೆ ಇಳಿಯದಂತೆ ಎಚ್ಚರಿಕೆ, ಭಾರೀ ಮಳೆಯ ಹಿನ್ನೆಲೆಯಲ್ಲಿ ಕ್ರಮಕೈಗೊಂಡ ಜಿಲ್ಲಾಡಳಿತ
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರು ಪಂಪಾ ನದಿಗಿಳಿಯದಂತೆ ಅಲ್ಲಿನ ಪತ್ತನಂತಿಟ್ಟ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪಂಪಾ ನದಿಯಲ್ಲಿ ನೀರಿನ ಹರಿವು ತೀವ್ರ ಹೆಚ್ಚಾಗಿದೆ. ನಿನ್ನೆ ಸಂಜೆ 5 ಗಂಟೆಗೆ ತುಲಾ ಮಾಸ ಪೂಜೆಗಾಗಿ ಶಬರಿಮಲೆ ದೇವಸ್ಥಾನವನ್ನು ತೆರೆಯಲಾಗಿತ್ತು. ಇಂದು ,ಭಾನುವಾರ ಬೆಳಗ್ಗೆ 5ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಈಗಾಗಲೇ ದರ್ಶನ ಆರಂಭವಾಗಿದೆ.
ಪಂಪಾ ನದಿಯಲ್ಲಿ ಸದ್ಯ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಯಾತ್ರಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಅಲ್ಲದೆ ಈ ದಾರಿಯಲ್ಲಿ ಸಾಧ್ಯವಾದಷ್ಟು ರಾತ್ರಿ ಸಂಚಾರ ಮಾಡಬೇಡಿ ಎಂದು ಜಲಸಂಪನ್ಮೂಲ ಸಚಿವ ರೋಷಿ ಅಗಸ್ಟಿನ್ ಮನವಿ ಮಾಡಿದ್ದಾರೆ. ಮಳೆಯಿಂದ ಉಂಟಾಗಬಹುದಾದ ಹಾನಿ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿರುವ ಜನರನ್ನು ಸ್ಥಳಾಂತರಿಸುವ ಕೆಲಸ ಪ್ರಗತಿಯಲ್ಲಿದೆ ಎಂದೂ ಅವರು ಇದೇ ವೇಳೆ ಹೇಳಿದರು. ಸದ್ಯ ಪತ್ತನಂತಿಟ್ಟ ಜಿಲ್ಲೆಯ ಆನತ್ತೋಡ್ ಡ್ಯಾಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಆಲೆಪ್ಪಿ, ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಳಂ ಹಾಗೂ ತ್ರಿಶ್ಶೂರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಘಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.