ನೆಮ್ಮದಿಯಾಗಿ ಇರಬೇಕೆಂದರೆ, ಗಂಡಸರು ಒಂದು ಪೆಗ್ ಹಾಕಿ ಮಲಗಬೇಕು | ಅದ್ಭುತ ಸಲಹೆ ನೀಡಿದ ಕಾಂಗ್ರೆಸ್ ಸಚಿವೆ !
ಛತ್ತೀಸ್‌ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಪ್ರತಿಪಾದಿಸುತ್ತಿದ್ದರೆ, ಅವರ ಮಂತ್ರಿಯೊಬ್ಬರು ಮಾತ್ರ ಮದ್ಯಪಾನ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ. ಅದೂ ಮಹಿಳಾ ಸಚಿವೆ ಅನಿಲಾ ಭೇಡಿಯಾ ಅವರು ದ್ರವಪಾನ ಮಾಡುವಂತೆ ಜನರಿಗೆ ಸಲಹೆ ನೀಡಿರುವ ವಿಡಿಯೋ ಸದ್ಯ ಭಾರಿ ವೈರಲ್ ಆಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಅನಿಲಾ ಭೇಡಿಯಾ ಅವರು ಪುರುಷರಿಗೆ ಒಂದು ಸ್ವಲ್ಪ ಪೆಗ್ ಹಾಕಿ, ಮಲಗಿ ಎಂಬಂತಹ ಹೇಳಿಕೆ ನೀಡಿದ್ದಾರೆ. ಇದರಿಂದ ಮಹಿಳೆಯರು ಒತ್ತಡ ಮುಕ್ತವಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ಅವರ ಮಾತಾಗಿದೆ.’
ಮನೆಯಲ್ಲಿ ದಿನವಿಡೀ ಮನೆಕೆಲಸ ಮಾಡುವ ಮೂಲಕ ಮಹಿಳೆಯರು ಸುಸ್ತಾಗುತ್ತಾರೆ ಮತ್ತು ಒತ್ತಡಕ್ಕೊಳಗಾಗುತ್ತಾರೆ. ಹೀಗಾಗಿ ಮಹಿಳೆಯರ ಒತ್ತಡ ಕಡಿಮೆ ಮಾಡಲು ಪುರುಷರು ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಮಾಡಿ ಮಲಗಬೇಕು ‘ ಎಂಬ ಅದ್ಭುತ !! ಸಲಹೆ ನೀಡಿದ್ದಾರೆ. ಸಚಿವರ ವಿಚಿತ್ರ ಸಲಹೆಯು ಇದೀಗ ವಿವಾದಾತ್ಮಕವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಕಾಮಿಡಿ ಟ್ರೊಲ್ ಆಗುತ್ತಿದೆ.
ಸಚಿವೆ ಒಂದು ಪೆಗ್ ಹಾಕಿ ಮಲಗಬೇಕು ಎಂದು ಹೇಳಿದ್ದಾರೆ. ‘ ‘ಮಲಗಬೇಕು ‘ ಅಥವಾ ‘ ನಿದ್ರಿಸಬೇಕು ?’ ಎಂಬ ಗೊಂದಲದಲ್ಲಿ ಜನ ಈಗ ಇದ್ದಾರಂತೆ !
ಅತ್ತ ಸಚಿವೆ ಅನಿಲಾ ಭೇಡಿಯಾ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ, ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪುರುಷರು ಮದ್ಯಪಾನ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. “ಮನೆ ಮತ್ತು ಮಕ್ಕಳ ಜವಾಬ್ದಾರಿಗಳಿಂದಾಗಿ ಮಹಿಳೆಯರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ನಾನು ಆಲ್ಕೋಹಾಲ್ ಚಟ ಕೆಟ್ಟದು ಎಂದು ಹೇಳಲು ಬಯಸಿದ್ದೆ ಮತ್ತು ಪ್ರತಿಯೊಬ್ಬರೂ ಅದರಿಂದ ಹೊರಬರಬೇಕು” ಎಂದು ಹೇಳಿದ್ದಾರೆ.ಇನ್ನು ಸಚಿವೆ ಅನಿಲಾ ಅವರ ಹೇಳಿಕೆಗೆ ಬಿಜೆಪಿ ಕೆಂಡಕಾರಿದೆ. ಸಚಿವರ ಇಂತಹ ಹೇಳಿಕೆಯು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತದೆ ಮತ್ತು ಮದ್ಯದ ಬಳಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಬಿಜೆಪಿ ಕಿಡಿಕಾರಿದೆ.