1 ರಿಂದ 5ನೇ ತರಗತಿ ಆರಂಭಕ್ಕೆ ಅಗತ್ಯವುಳ್ಳ ಎಲ್ಲಾ ಪೂರ್ವ ಸಿದ್ಧತೆ ಪೂರ್ಣ, ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ : ಸಚಿವ ಬಿ.ಸಿ.ನಾಗೇಶ್
ಬೆಂಗಳೂರು: ಒಂದರಿಂದ ಐದನೇ ತರಗತಿ ಆರಂಭಕ್ಕೆ ಅಗತ್ಯವುಳ್ಳ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿ.ಇ.ಒ.ಗಳು, ಡಿ.ಡಿ.ಪಿ.ಐಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ರಾಜ್ಯದ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕಲರವ ಶುರುವಾಗುವ ಎಲ್ಲಾ ಸಾಧ್ಯತೆ ಇದೆ
.ನಿನ್ನೆ ಮಲ್ಲೇಶ್ವರನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಪ್ರಾಥಮಿಕ ಶಾಲೆ ಆರಂಭದ ಕುರಿತಂತೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭ ವಿವರಣೆ ನೀಡಿದ ಶಿಕ್ಷಣ ಸಚಿವರು, ಶೈಕ್ಷಣಿಕ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಶನಿವಾರ ಪೂರ್ಣದಿನ ಹಾಗೂ ಭಾನುವಾರ ತರಗತಿ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಪರೀಕ್ಷೆಗೆ ಅಗತ್ಯವಿದ್ದಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಜನವರಿ-ಫೆಬ್ರವರಿಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.