ಉಪ್ಪಿನಂಗಡಿ:
ಮೆಸ್ಕಾಂ ಕಛೇರಿಗೆ ಆಡು ಬಂದ ವಿಚಾರವಾಗಿ ನಡೆದ ಜಗಳ, ಕರ್ತವ್ಯನಿರತ ಲೈನ್ ಮ್ಯಾನ್ ಗಳಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರತ ಮೆಸ್ಕಾಂ ಸಿಬಂದಿಗಳ ಮೇಲೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಅ 15 ರಂದು ಸಂಜೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯಲ್ಲಿ ನಡೆದಿದ್ದು,ಆಡಿನ ವಿಚಾರದಲ್ಲಿ ನಡೆದ ವಾಗ್ವಾದ ಹಲ್ಲೆಯ ಮಟ್ಟಕ್ಕೆ ತಲುಪಿದೆ.ಘಟನೆಯಲ್ಲಿ ಉಪ್ಪಿನಂಗಡಿಯ ಮೆಸ್ಕಾಂ ಕಚೇರಿಯ ಸಿಬಂದಿಗಳಾದ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು ಸಿಬ್ಬಂದಿ ಸತೀಶ್ ಹಿರೆಬಂಡಾಡಿ ಹಲ್ಲೆಗೊಳಗಾದ ಸಿಬ್ಬಂದಿಗಲಳೆಂದು ಗುರುತಿಸಲಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾಗಿ ಗಾಯಗೊಂಡಿರುವ ಅವರಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದೊಣ್ಣೆಯಿಂದ ಹಲ್ಲೆ ನಡೆಸಿದಾತ ಉಪ್ಪಿನಂಗಡಿ ಗ್ರಾಮದ ಪರಾರಿ ನಿವಾಸಿ ಇಸುಬು ಎಂದು ಗುರುತಿಸಲಾಗಿದೆ. ಇಸುಬು ಬಳಿ ಸುಮಾರು 50 ಆಡುಗಳಿದ್ದು ಅದನ್ನು ಅವರು ನಿತ್ಯ ಉಪ್ಪಿನಂಗಡಿ ಪೇಟೆ ಹಾಗೂ ಇತರೆಡೆ ಮೇಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾದ, ಸಣ್ಣಪುಟ್ಟ ಅಪಘಾತಗಳು ನಡೆದ ಹಲವು ಘಟನೆಗಳು ನಡೆದು ವಾಗ್ವಾದದಲ್ಲಿ ಮುಕ್ತಾಯಗೊಂಡಿದೆ ಎನ್ನಲಾಗಿದೆ. ಅಲ್ಲದೇ ಈ ಆಡುಗಳು ಕಛೇರಿ ಹಾಗೂ ಮನೆ ಮುಂಭಾಗ ಇರುವ ಹೂವು ಹಾಗೂ ಇತರ ಗಿಡಗಳನ್ನು ತಿಂದ ಪ್ರಸಂಗಗಳು ಉಪ್ಪಿನಂಗಡಿ ಪೇಟೆಯಾದ್ಯಂತ ಕೇಳಿ ಬರುತ್ತಿವೆ.

ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಸುಮಾರು 30-40 ಆಡುಗಳು ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ಹೊಕ್ಕು ಅಲ್ಲಿದ್ದ ಹೂವಿನ ಗಿಡ ಹಾಗೂ ಇತರೆ ಗಿಡಗಳನ್ನು ತಿಂದಿವೆ. ಕಳೆದ ವಾರ ಕೂಡ ಇಸುಬುಗೆ ಸೇರಿದ ಆಡುಗಳು ಮೆಸ್ಕಾಂ ಕಚೇರಿ ಅವರಣಕ್ಕೆ ನುಗ್ಗಿದ್ದು,ಆ ಸಂದರ್ಭ ಮತ್ತೆ ಆಡನ್ನು ಕಚೇರಿಯೊಳಗಡೆ ಬಿಡದಂತೆ ಅಲ್ಲಿನ ಸಿಬಂದಿಗಳು ತಾಕೀತು ಮಾಡಿದ್ದರು.

ಆದರೆ ಮತ್ತೆ ಆಡುಗಳು ಕಚೇರಿಯ ಒಳಗಡೆ ಬಂದಾಗ ಅಲ್ಲಿದ್ದ ಸಿಬಂದಿಗಳು ಹಲವು ಆಡುಗಳನ್ನು ಓಡಿಸಿದ್ದಾರೆ. ಅಗ ಆಡುಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ. ಇದರಿಂದ ಕೆರಳಿದ ಇಸುಬು ದೊಣ್ಣೆ ಹಿಡ್ಕೊಂಡು ಮೆಸ್ಕಾಂ ಕಚೇರಿ ಬಳಿ ಬಂದಿದ್ದು ಅದೇ ವೇಳೆ ಲೈನ್ ಮ್ಯಾನ್ ವಿತೇಶ್ ರವರು ಪೆರಿಯಡ್ಕ ಪರಿಸರದ ಲೈನ್ ನಲ್ಲಿದ್ದ ವಿದ್ಯುತ್ ಸಮಸ್ಯೆ ದುರಸ್ತಿ ಮಾಡಿ ಕಚೇರಿಗೆ ಬಂದಿದ್ದಾರೆ. ಬೈಕ್ ನಿಲ್ಲಿಸಿ ಕಛೇರಿ ಅವರಣದೊಳಗೆ ವಿತೇಶ್ ಪ್ರವೇಶ ಮಾಡುತ್ತಲೇ ದೊಣ್ಣೆ ಹಿಡಿದು ನಿಂತಿದ್ದ ಇಸುಬು ಅವರ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ವಿತೇಶ್ ರವರ ರಕ್ಷಣೆಗೆ ಬಂದ ಕಚೇರಿ ಸಿಬಂದಿ ಸತೀಶ್ ಅವರ ಮೇಲೂ ಇಸುಬು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇಸುಬು ಹಲ್ಲೆ ನಡೆಸುವ ಹಾಗೂ ಸಿಬಂದಿಗಳಿಗೆ ಅವಾಚ್ಯವಾಗಿ ಬೈಯುವ ದೃಶ್ಯಗಳನ್ನು ಮೆಸ್ಕಾಂ ಕಚೇರಿಯ ಸಿಬಂದಿಗಳು ತಮ್ಮ ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿದ್ದು ಅದು ಅವರ ಬಳಿ ಲಭ್ಯವಿದೆ.

Leave A Reply

Your email address will not be published.