ನೈತಿಕ ಪೊಲೀಸ್‌ಗಿರಿ ನೈತಿಕವೋ,ಅನೈತಿಕವೋ | ಮತ್ತೆ ಶುರುವಾಗಿದೆ ಚರ್ಚೆ,ಬೊಮ್ಮಾಯಿ ಅವರಿಗೆ ಸಿದ್ದು ತರಾಟೆ
ನೈತಿಕತೆ ಇಲ್ಲದೆ ಬದುಕುವುದಕ್ಕಾಗಲ್ಲ. ಎಲ್ಲಾ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ; ನೈತಿಕತೆಗೆ ಧಕ್ಕೆಯಾದಾಗ ಆ್ಯಕ್ಷನ್,ರಿಯಾಕ್ಷನ್ ಇರುತ್ತದೆ. ಅದನ್ನು ಸಮಾಜ ಆವಾಗಾವಾಗ ಅನುಭವಿಸಿದೆ.
ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಭೇಟಿ ವೇಳೆ ನೈತಿಕತೆಯ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಕೆಲವರು ವಿರೋಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಆದರೆ ಅವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿದರೆ ಬೊಮ್ಮಾಯಿ ಅವರ ಹೇಳಿಕೆ ಸಮರ್ಥನೀಯವಾಗಿದೆ ಎನ್ನಬಹುದು. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ ಎಂದಿದ್ದರು.
ಇದನ್ನು ಸರಿಯಾಗಿ ಗಮನಿಸಿದಾಗ ಇತರರ ಯಾವುದೇ ಭಾವನೆಗಳಿಗೆ ಧಕ್ಕೆ ಆಗದ ಹಾಗೇ ನಡೆದುಕೊಂಡರೆ ನೈತಿಕ ಪೊಲೀಸ್‌ಗಿರಿ ಪ್ರಮೇಯವೇ ಉದ್ಭವಿಸಲ್ಲ. ರಾಜಕೀಯ ಕಾರಣಕ್ಕಾಗಿ ಪರ-ವಿರೋಧ ಅಭಿಪ್ರಾಯಗಳು ಬರವುದು ಸಹಜ. ಆದರೆ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡರೆ ಅಂತ ವಿಶೇಷತೆ ಏನೂ ಇಲ್ಲ.
ಆಕ್ಷನ್ ಗೆ ಇರತ್ತೆ ಒಂದು ರಿಯಾಕ್ಷನ್ !
ಅ.13ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ “ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ,” ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದರು.
“ನೈತಿಕ ಪೊಲೀಸ್‌ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ,” ಎಂದಿದ್ದರು.
“ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಅನ್ನುವುದು ಸಮಾಜದಲ್ಲಿ ಬೇಕಲ್ವಾ? ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗುತ್ತಾ? ನಾವು ನೈತಿಕತೆ ಇಲ್ಲದೆ ಬದುಕುವುದಕ್ಕೆ ಆಗಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತದೆ,” ಎಂದೂ ಸಹ ವ್ಯಾಖ್ಯಾನ ಮಾಡಿದ್ದರು.
ಇನ್ನೊಬ್ಬರ ಕುಟುಂಬದ ಒಳಕ್ಕೆ, ಇನ್ನೊಬ್ಬರ ಮನೆಗೆ ನುಗ್ಗಲು ಹೋಗಿ ಸಿಲುಕಿಕೊಂಡರೆ, ರಿಯಾಕ್ಷನ್ ಬಾರದೆ ಹೋಗುತ್ತಾ ? ನೂರಕ್ಕೆ 90 ಭಾಗ ಕ್ರೈಮ್ ತಡೆಯುವವರು ಜಾಗೃತ ನಾಗರಿಕರು. ಹೆಚ್ಚಿನ ಸಂದರ್ಭಗಳಲ್ಲಿ ಕ್ರಿಮಿನಲ್ ಗಳ ಬಗ್ಗೆ ಅನೈತಿಕ ಚಟುವಟಿಕೆಗಳ ಬಗ್ಗೆ ಆಕ್ಟಿವಿಟಿ ಗಳನ್ನು ಕಡಿಯುವವರು ಮತ್ತು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರು ಸಾರ್ವಜನಿಕರು. ಈಗ ಇಂತಹ ಸಾರ್ವಜನಿಕರಿಗೆ ನೈತಿಕ ಪೊಲೀಸರು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಇವತ್ತು ನೈತಿಕ ಪೊಲೀಸ್ ಗಿರಿಯ ಬಗ್ಗೆ ಮಾತಾಡುತ್ತಿರುವವರ ಹೆಣ್ಣು ಮಕ್ಕಳು ಪಾರ್ಕಿನಲ್ಲಿ, ನಿರ್ಜನ ಪ್ರದೇಶದಲ್ಲಿ ಕಾಣ ಸಿಕ್ಕರೆ ಆಗ ಆಗೋದು ನೈತಿಕ ಪೊಲೀಸ್ ಗಿರಿಯಾ, ಅನೈತಿಕ ಪೊಲೀಸ್ ಗಿರಿಯ ? ನೈತಿಕ ಪೋಲಿಸ್ ಗಿರಿ ಇಲ್ಲದೆ ಹೋದರೆ ನಾಗರಿಕ ಸಮಾಜ ಅನಾಗರಿಕ ಆಗೋದು ಪಕ್ಕಾ ! ಎನ್ನುವುದು ಕೆಲವರ ವಾದ.
ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ,ಸಿದ್ದರಾಮಯ್ಯ ಅವರು “ನಾಳೆಯಿಂದ ರಾಜ್ಯದಲ್ಲ ಹೆಣ್ಣುಮಕ್ಕಳ ಮೇಲೆ ಅನೈತಿಕ ಪೊಲೀಸ್‌ಗಿರಿಯನ್ನು ಯಾರೇ ನಡೆಸಲಿ, ಅವರದ್ದು ಮುಖವಾಡ ಮಾತ್ರ. ಅಸಲಿ ಮುಖ ಅಂತಹ ಕೃತ್ಯಕ್ಕೆ ಪ್ರಚೋದನೆ, ಉತ್ತೇಜನ ಮತ್ತು ರಕ್ಷಣೆ ನೀಡುವ ಕೆಲಸ ನಿಮ್ಮದು ಎಂದು ತಿಳಿದುಕೊಳ್ಳಬಹುದೇ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.