ಪೆರಾಬೆ: ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ತಂತಿ ಬೇಲಿ ಅಳವಡಿಸಿದ ಗ್ರಾ.ಪಂ
ಕಡಬ :ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳದಲ್ಲಿ ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ಅ.13 ರಂದು ಗ್ರಾ.ಪಂ ವತಿಯಿಂದ ಬೇಲಿ ಹಾಕುವ ಕಾರ್ಯ ನಡೆದಿದ್ದು, ಗ್ರಾ.ಪಂ ಅಧಿಕಾರಿಗಳು,ಪೊಲೀಸರ ಉಪಸ್ಥಿತಿಯಲ್ಲಿ ದಲಿತ ಮುಖಂಡರ ಸಹಕಾರದೊಂದಿಗೆ ತಂತಿ ಬೇಲಿ ಹಾಕಲಾಯಿತು.
ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪಿಡಿಒ ಶಾಲಿನಿ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ರೈ, ಉಪಾಧ್ಯಕ್ಷೆ ಸಂಧ್ಯಾ ಸ್ಥಳದಲ್ಲಿ ಹಾಜರಿದ್ದರು. ಕಡಬ ಠಾಣಾ ಎ ಎಸೈ ಸುರೇಶ್, ಹೆಡ್ ಕಾನ್ಸ್ಟೇಬಲ್ ದೀಪು ಅವರು ಭದ್ರತೆ ಒದಗಿಸಿದರು. ಅಣ್ಣಿ ಎಳ್ತಿಮಾರ್, ದಿನೇಶ್ ಅಗತ್ತಾಡಿ, ರಾಘವ ಕಳಾರ , ಶೀನ ಬಾಳಿಲ,ಚಂದ್ರಪ್ಪ,ರಮೇಶ ಕಡಬ,ತಾರಾನಾಥ, ಅಶೋಕ ನೆಲ್ಯಾಡಿ, ಗಿರಿಜಾ ಸೇರಿದಂತೆ ಸುಮಾರು ನಲ್ವತ್ತು ಮಂದಿ ದಲಿತ ಸಂಘಟನೆಯ ಮುಖಂಡರು ಬೇಲಿ ಹಾಕಲು ನೆರವಾದರು.
ಜಾಗದಲ್ಲಿದ್ದ ತೆಂಗಿನ ಗಿಡ,ನೀರಿನ ಪೈಪ್ ಗ್ರಾ.ಪಂ ವಶಕ್ಕೆ
ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗದಲ್ಲಿ ಯಾವುದೇ ಕೃಷಿ ಮಾಡದಂತೆ ಸೂಚಿಸಿದ್ದರೂ ಸ್ಥಳೀಯ ವ್ಯಕ್ತಿ ಕೃಷಿಯನ್ನು ಮಾಡಿ ಪೈಪ್ ಲೈನ್ ಅಳವಡಿಸಿದ್ದರು.ಈ ಜಾಗಕ್ಕೆ ತಂತಿ ಬೇಲಿ ಅವಳವಡಿಸಿದ ಬಳಿಕ ತೆಂಗಿನ ಗಿಡ ಮತ್ತು ಪೈಪ್ ಲೈನ್ ಗಳ ತೆರವು ಮಾಡಲಾಗುತ್ತಿದ್ದು ಇವುಗಳನ್ನು ಗ್ರಾ.ಪಂ ವಶಕ್ಕೆ ಪಡೆದಿದೆ.
ಹೋರಾಟದ ಫಲ: ಜಾಗ ಮಂಜೂರುರಾತಿ ಸೇರಿದಂತೆ ವಿವಿಧ ಹಂತದ ಪ್ರಕ್ರಿಯೆಗಳಲ್ಲಿ ದಲಿತ ಸಂಘಟನೆ, ಮುಖಂಡರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು, ವಿವಿಧ ಹಂತದ ಅಧಿಕಾರಿಗಳೂ ಸೂಕ್ತವಾಗಿ ಸ್ಪಂದಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಇತ್ತೀಚೆಗೆ ಬೇಲಿ ಹಾಕಲು ಗ್ರಾ.ಪಂ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಏಳು ದಿನದ ಒಳಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪಿಡಿಒ ಅವರಿಗೆ ದಲಿತ ಮುಖಂಡರು ಮನವಿಯನ್ನೂ ನೀಡಿ ಬೇಲಿ ಹಾಕದಿದ್ದಲ್ಲಿ ಗ್ರಾ.ಪಂ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದರು.ಇದೀಗ ಬೇಲಿ ಹಾಕುವ ಕಾರ್ಯ ನಡೆದಿದ್ದು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.