ಕಡಬ : ಎರ್ಮಾಳದಲ್ಲಿ ಪತ್ತೆಯಾದ ಅಸ್ತಿಪಂಜರ ಸತೀಶ್ ಅವರದ್ದು ಎಂಬುದಕ್ಕೆ ಪುಷ್ಟಿ ನೀಡಿದೆ ವಾಚ್
ಕಡಬ: ಕುಂತೂರು ಗ್ರಾಮದ ಎರ್ಮಾಳ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಎರಡು ತಿಂಗಳ ನಾಪತ್ತೆಯಾಗಿದ್ದ ಸತೀಶ್ ಅವರದ್ದೆ ಎಂದು ಬಹುತೇಕ ಖಚಿತವಾಗಿದೆ. ಕುಂತೂರು ಗ್ರಾಮದ ಎರ್ಮಾಳ ನಿವಾಸಿ ಸತೀಶ್(50ವ) ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆಗಸ್ಟ್ 2 ರಂದು ಮನೆಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಸತೀಶರ ಪತ್ನಿ ಗೀತಾರವರು ಕಡಬ ಠಾಣೆಗೆ ದೂರು ನೀಡಿದ್ದರು. ಸತೀಶ್ ನಾಪತ್ತೆಯಾಗಿ ಎರಡು ತಿಂಗಳಾದ್ರೂ ನಾಪತ್ತೆಯಾದ ವ್ಯಕ್ತಿಯ ಪತ್ನಿ ದೂರು ನೀಡಿರಲಿಲ್ಲ. ಅ.10ರಂದು ನಾಪತ್ತೆಯಾದ ವ್ಯಕ್ತಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಅನ್ನಡ್ಕ ಎಂಬಲ್ಲಿ ಸಣ್ಣ ಹಳ್ಳವೊಂದರಲ್ಲಿ ಮಾನವನ ತಲೆಬುರುಡೆಯೊಂದು ಮಳೆ ನೀರಿಗೆ ಕೊಚ್ಚಿಕೊಂಡು ಬಂದಿತ್ತು. ಇನ್ನು ತಲೆಬುರುಡೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಿನ್ನಲೆ, ಎರಡು ದಿನಗಳ ಹಿಂದೆ ಹುಡುಕಾಟ ನಡೆಸಿದ ಸ್ಥಳೀಯರಿಗೆ ಅರೆ ಬರೆ ಅಸ್ತಿ ಪಂಜರ ಸಿಕ್ಕಿದೆ.
ಅಸ್ತಿ ಪಂಜರ ಸಿಕ್ಕ ವಿಚಾರ ಪ್ರಚಾರವಾಗುತ್ತಿದ್ದಂತೆ ಎರಡು ತಿಂಗಳುಗಳ ಕಾಲ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ದೂರು ನೀಡದ ಪತ್ನಿ ಕಡಬ ಠಾಣೆಗೆ ದೂರು ನೀಡಿದ್ದರು. ಇದೀಗ ಸ್ಥಳೀಯರಿಗೆ ಇಂದು ವಾಚ್ ಹಾಗೂ ಬಟ್ಟೆಗಳು ಸಿಕ್ಕಿದ್ದು ಬಳಿಕ ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು ಪೋಲಿಸರು ತನಿಖೆ ನಡೆಸಿದ್ದಾರೆ.
ಈಗಾಗಲೇ ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಬಟ್ಟೆ ಹಾಗೂ ವಾಚ್ ದೊರೆತಿದ್ದು ಅದು ಸತೀಶ್ ಅವರದ್ದೆ ಎಂದು ಸತೀಶ್ ಅವರ ಪತ್ನಿ ಗೀತಾ ಅವರು ದೃಢಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಕಾಡಿನಲ್ಲಿ ದೊರೆತ ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಅಲ್ಲಿಂದ ವರದಿ ಬಂದ ಬಳಿಕವೇ ಪೋಲಿಸರು ಅಧಿಕೃತವಾಗಿ ಘೋಷಣೆ ಮಾಡಬಹುದು ಎಂದು ತಿಳಿದು ಬಂದಿದೆ.