ಕರಾವಳಿಯಲ್ಲಿ ಮತ್ತೆ ಅನಿರೀಕ್ಷಿತ ಮಳೆ | ಅ.16ರವರೆಗೂ ಸುರಿಯಲಿದೆ ಗುಡುಗು ಸಹಿತ ಭಾರೀ ಮಳೆ
ಕರಾವಳಿಯಲ್ಲಿ ಮತ್ತೆ ಅನಿರೀಕ್ಷಿತ ಮಳೆಯಿಂದ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು,ಅ.16ರವರೆಗೂ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಿಲ್ಲೆಯ ಘಟ್ಟದ ತಪ್ಪಲಿನ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲೂ ಭಾರೀ ಮಳೆ ಸುರಿದಿದೆ. ಘಟ್ಟದ ಮೇಲಿನ ಭಾಗಗಳಲ್ಲೂ ಮಳೆಯಾಗುತ್ತಿರುವುದರಿಂದ ನದಿ, ತೊರೆಗಳಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದೆ. ತಗ್ಗು ಪ್ರದೇಶದಲ್ಲಿರುವ ತೋಟ, ಗದ್ದೆಗಳಿಗೆ ನೀರು ನುಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಇನ್ನೊಂದೆಡೆ ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿರುವ ಭತ್ತ ಪೈರು ಅಡ್ಡ ಬಿದ್ದು, ರೈತರಲ್ಲಿ ಆತಂಕಕ್ಕೂ ಕಾರಣವಾಗಿದೆ.
ಅ.16ರವರೆಗೂ ಗುಡುಗು ಸಹಿತ ಮಳೆ
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮ ಸುಳಿಗಾಳಿ ಹಿನ್ನೆಲೆಯಲ್ಲಿ ಮಳೆ ಬಿರುಸಾಗಿದೆ. ಸುಳಿಗಾಳಿಯಿಂದಾಗಿ ಮೋಡಗಳ ನಿರ್ಮಾಣವಾಗುವ ಪ್ರಕ್ರಿಯೆಗೆ ವೇಗ ಸಿಕ್ಕಿದ್ದು, ಜತೆಗೆ ಗಾಳಿಯೂ ಸೇರಿಕೊಂಡಿದೆ. ದಕ್ಷಿಣ ಭಾರತ ವ್ಯಾಪ್ತಿಯಲ್ಲಿ ಉಂಟಾದ ಹವಾಮಾನ ಬದಲಾವಣೆಯೇ ಮಳೆಗೆ ಕಾರಣವಾಗಿದೆ. ಬಂಗಾಳ ಕೊಲ್ಲಿಯ ಉತ್ತರ ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯೂ , ಇವೆಲ್ಲ ಮಳೆಗೆ ಪೂರಕ ವಾತಾರಣವಾಗಿ ಪರಿಣಮಿಸಿದೆ. ಅ.16ರವರೆಗೂ ಗುಡುಗು ಸಹಿತ ಮಳೆಯಾಗಲಿದೆ. ಇನ್ನೂ ನಾಲ್ಕು ದಿನ ಯೆಲ್ಲೋ ಅಲರ್ಟ್ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.