ಸದ್ಯದಲ್ಲೇ ಮರುಕಳಿಸಲಿದೆ ಪುಟ್ಟ-ಪುಟ್ಟ ಹೆಜ್ಜೆ ಹಾಕುತ್ತಾ ಶಾಲೆಗೆ ಹೋಗೋ ಪುಟಾಣಿಗಳ ಕಲರವ | ಅ. 21 ರಿಂದ 1-5 ತರಗತಿಗಳು ಆರಂಭದ ಜೊತೆಗೆ ಶುರುವಾಗಲಿದೆ ಬಿಸಿಯೂಟ !!
ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳು ಮತ್ತೆ ಒಂದೊಂದೇ ಹಂತದಲ್ಲಿ ಆರಂಭವಾಗುತ್ತಿವೆ. ಇಷ್ಟು ದಿನ ಬೆಚ್ಚಗೆ ಮನೆಯಲ್ಲಿ ಕುಳಿತಿದ್ದ ಪುಟ್ಟ ಮಕ್ಕಳು ಇನ್ನು ಶಾಲೆಗೆ ಹೊರಡಬೇಕಾದ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಪುಟ್ಟ ಬ್ಯಾಗುಗಳನ್ನು ಬೆನ್ನಿಗೆ ಹಾಕಿಕೊಂಡು ಶಾಲೆಗೆ ಹೋಗುವ ದೃಶ್ಯಗಳು ಸುಮಾರು ಒಂದುವರೆ ವರ್ಷದಿಂದ ಕಣ್ಮರೆಯಾಗಿದ್ದವು. ಆದರೆ ಈ ದೃಶ್ಯಗಳು ಕೆಲದಿನಗಳಲ್ಲೇ ಮತ್ತೆ ನಮ್ಮ ಮುಂದೆ ಬರಲಿವೆ.
ಹೌದು, 1ರಿಂದ 5ನೇ ತರಗತಿಗಳು ಅ. 21ರಂದು ಪುನರಾರಂಭವಾಗುತ್ತಿದ್ದು, ಬಿಸಿಯೂಟ ವಿತರಣೆಯೂ ಪೂರ್ಣಪ್ರಮಾಣದಲ್ಲಿ ಶುರುವಾಗಲಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಾಲೆ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಒಪ್ಪಿದ ಕೊರೊನಾ ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆಗೂ ಚರ್ಚೆ ನಡೆದಿದೆ. ಆನ್‌ಲೈನ್‌ಗಿಂತ ಭೌತಿಕ ತರಗತಿಗಳು ಪರಿಣಾಮಕಾರಿಯಾಗಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ಹಾಗೂ ಬಿಸಿಯೂಟ ಆರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.
ಶುಲ್ಕ ಸಮಸ್ಯೆ ಪರಿಹಾರಕ್ಕೆ ಕ್ರಮ:
ಖಾಸಗಿ ಶಾಲೆಯ ಶುಲ್ಕ ಸಮಸ್ಯೆ ಕುರಿತು ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕ ನಂತರ ಪರಿಶೀಲಿಸಿ, ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಲಾಗುವುದು. ಇದರ ಜೊತೆಗೆ ಪಾಲಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಯ ಸಭೆ ನಡೆಸಲಿದ್ದೇವೆ. ಆಂಧ್ರ ಪ್ರದೇಶ, ತೆಲಂಗಾಣ ಮಾದರಿಯಲ್ಲಿ ಶುಲ್ಕ ನಿಯಂತ್ರಣ ಸಮಿತಿ ರಚನೆ ಮಾಡಬಹುದೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಪಠ್ಯ ಪುಸ್ತಕ ಪರಿಷ್ಕರಣೆ ನಿಶ್ಚಿತ:
ಪಠ್ಯದಲ್ಲಿರುವ ಅನೇಕ ಅಂಶಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯು ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಮಾಡಿರುವ ತಪ್ಪುಗಳು ಹಾಗೂ ಕೈಬಿಟ್ಟಿರುವ ಅಂಶಗಳು ಹಾಗೂ ಸೇರಿಸಬಹುದಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ, ಹೊಸ ಸಮಿತಿ ನಿರ್ದಿಷ್ಟ ಕಾಲಮಿತಿಯಲ್ಲಿ ವರದಿ ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಪಠ್ಯಪರಿಷ್ಕರಣೆ ಮಾಡುತ್ತೇವೆ ಎಂದು ಸಚಿವ ನಾಗೇಶ್ ತಿಳಿಸಿದರು.
ಸೇತುಬಂಧ ಕೋರ್ಸ್:
ಹಾಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.30 ಪಠ್ಯ ಕಡಿತ ಮಾಡಲಾಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಈ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳಿಗೂ ಅನುಕೂಲ ಆಗುವಂತೆ ಪೂರ್ಣ ಪ್ರಮಾಣದ ಪಠ್ಯ ಬೋಧನೆ ಹಾಗೂ ಕಲಿಕೆಗೆ ತಕ್ಕಂತೆ ಸೇತುಬಂಧ ಕೋರ್ಸ್ ರೂಪಿಸಲಿದ್ದೇವೆ. ಈ ವರ್ಷ ಯಾವುದೇ ಪಠ್ಯ ಕಡಿತ ಮಾಡುವುದಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಪಠ್ಯಕ್ರಮ ಪೂರ್ಣವಾಗಿ ಮುಗಿಸಲಿದ್ದೇವೆ. ಅವಶ್ಯಕತೆ ಬಿದ್ದರೆ, ಶನಿವಾರ ಹಾಗೂ ಭಾನುವಾರ ಕೂಡ ವಿಶೇಷ ತರಗತಿ ಮಾಡಲಾಗುವುದು ಎಂದರು.
ವರ್ಗಾವಣೆ ಅಧಿಸೂಚನೆ ಶೀಘ್ರ:
ಶಿಕ್ಷಕರ ವರ್ಗಾವಣೆ ವಿಳಂಬವಾಗುತ್ತಿದ್ದು, ಕಾನೂನು ತೊಡಕು ನಿವಾರಣೆ ಮಾಡಿ ಶೀಘ್ರ ಪ್ರಕ್ರಿಯೆ ಮರು ಆರಂಭಗೊಳಿಸುವುದಾಗಿ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಶಾಲಾ ಶಿಕ್ಷಕರ ವರ್ಗಾವಣೆ ನಾನಾ ಕಾರಣದಿಂದ ವಿಳಂಬ ಆಗುತ್ತಿದೆ. ಸದ್ಯ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ. ಮುಂದೆ ಕಾನೂನಿನ ತೊಡಕು ಬಾರದಂತೆ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಿದ್ದೇವೆ. ಶೀಘ್ರವೇ ಅಧಿಸೂಚನೆ ಹೊರಡಿಸಲಿದ್ದೇವೆ ಎಂದರು. ಈ ವೇಳೆಗಾಗಲೇ ವರ್ಗಾವಣೆ ಆರಂಭಗೊಳ್ಳಬೇಕಾಗಿತ್ತು. ಕೆಲವು ಶಿಕ್ಷಕರು ವರ್ಗಾವಣೆ ನಿಯಮ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ವರ್ಗಾವಣೆಗೆ ತಡೆಯಾಗಿದೆ. ಶಿಕ್ಷಣ ಇಲಾಖೆಯು ಕಾನೂನಿನ ತೊಡಕು ನಿವಾರಣೆಗೆ ಮುಂದಾಗಿದೆ. 72 ಸಾವಿರ ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿ, ಕೌನ್ಸೆಲಿಂಗ್‌ಗಾಗಿ ಕಾಯುತ್ತಿದ್ದಾರೆ.
ಇಷ್ಟು ದಿನ ಚಿನ್ನರ ಚಿಲಿಪಿಲಿ ಇಲ್ಲದೆ ಮಂಕಾಗಿದ್ದ ಶಾಲೆಗೆ ಇದೀಗ ಪುಟ್ಟ ಮಕ್ಕಳು ರಂಗು ಹೆಚ್ಚಿಸಲಿದ್ದಾರೆ. ಇಷ್ಟು ದಿನ ಶಿಕ್ಷಣ ಕ್ಷೇತ್ರಕ್ಕೆ ಕವಿದಿದ್ದ ಕಾರ್ಮೋಡ ಸರಿಯುತ್ತಿದ್ದು, ಪೂರ್ಣಪ್ರಮಾಣದ ಪಠ್ಯ ಬೋಧನೆ ಶುರುವಾಗಲಿದೆ.