ಮಂಗಳೂರು : ಜಿಲ್ಲೆಯ ಬುದ್ಧಿವಂತರನ್ನೇ ಮಂಗ ಮಾಡಿದ ಹೊರರಾಜ್ಯದ ಮಹಿಳೆಯರು!! ಮಸೀದಿಗಳಿಗೆ ತೆರಳಿ ಕಣ್ಣೀರು ಹಾಕಿದ ಹಿಂದಿದೆ ಷಡ್ಯಂತ್ರ!!
ಮಹಿಳೆಯರಿದ್ದ ಅದೊಂದು ತಂಡವು ದೂರದ ಮಧ್ಯಪ್ರದೇಶದಿಂದ ತೀರ್ಥಯಾತ್ರೆ ಕೈಗೊಂಡಿದ್ದು, ಅದರಂತೆ ಮಂಗಳೂರಿನ ದೇವಸ್ಥಾನಗಳಿಗೂ ಭೇಟಿ ನೀಡಿ ದರ್ಶನ ಪಡೆದಿದ್ದ ಅವರ ಬ್ಯಾಗ್, ಪರ್ಸ್, ರೈಲು ಟಿಕೆಟ್ ಸಹಿತ ಕೆಲ ನಗದು ಕಳವಾಗಿದ್ದು ಮಹಿಳೆಯರ ಅಸಹಾಯಕ ಸ್ಥಿತಿಗೆ ಆ ಕೂಡಲೇ ಅನ್ಯ ಮತೀಯರಿಂದ ಉತ್ತಮ ಸ್ಪಂದನೆ ಸಿಕ್ಕಿತಾದರೂ ಆ ಬಳಿಕ ಅವರ ಮುಖವಾಡ ಕಳಚಿಬಿದ್ದಿದೆ.ಅಸಹಾಯಕರಾಗಿ ಅಂಗಲಾಚುವ ಹಿಂದೆ ಬೇರೆಯೇ ಷಡ್ಯಂತ್ರ ಇದೆ, ಪಕ್ಕಾ ಪ್ಲಾನ್ ಮಾಡಿ ಕಥೆ ಕಟ್ಟುವ, ಆ ಬಳಿಕ ಸಿಕ್ಕಿದಲ್ಲಿ ಹಣ ಲೂಟುವ ಈ ಗ್ಯಾಂಗ್ ಬಗ್ಗೆ ಸದ್ಯ ಜಿಲ್ಲೆಯ ಜನತೆ ಎಚ್ಚರಿಕೆಯಿಂದಿರಬೇಕಾಗಿದೆ!!
ಅಂದಹಾಗೆ ಇಷ್ಟೆಲ್ಲಾ ನಡೆದದ್ದು ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ.ಎಷ್ಟಾದರೂ ಕುಡ್ಲದ ಜನತೆ ಕೋಮು ಸಹೋದರತೆಯಲ್ಲಿ ಎಲ್ಲವಕ್ಕೂ ಸಹಕರಿಸಿಕೊಂಡು ಬಂದವರು. ಅದರಲ್ಲೂ ಹೆಣ್ಣು ಕಣ್ಣೀರಿಟ್ಟರೆ, ಸಹಾಯಕ್ಕೆ ಅಂಗಲಾಚಿದರೆ ಎಂತವರ ಕಲ್ಲು ಮನಸ್ಸು ಕೂಡಾ ಕರಗದೇ ಇರುವುದಿಲ್ಲ. ಇಲ್ಲಿ ನಡೆದಿದ್ದು ಕೂಡಾ ಅದೇ!
ಮಂಗಳೂರಿನ ಮಸೀದಿಯೊಂದಕ್ಕೆ ಮಹಿಳೆಯರ ತಂಡವೊಂದು ತಾವು ಮಧ್ಯಪ್ರದೇಶದಿಂದ ತೀರ್ಥ ಕ್ಷೇತ್ರಗಳಲ್ಲಿ ದರ್ಶನಕ್ಕಾಗಿ ಬಂದಿದ್ದು ಮಂಗಳೂರಿನ ದರ್ಶನ ಪಡೆದ ಬಳಿಕ ರೈಲು ನಿಲ್ದಾಣದಲ್ಲಿ ತಮ್ಮ ಹಣ, ಬ್ಯಾಗ್ ಎಲ್ಲವನ್ನೂ ಕಳೆದುಕೊಂಡಿದ್ದೇವೆ, ಈಗ ಮನೆಗೆ ಹೋಗಲು ಹಣವಿಲ್ಲ ಊಟವೂ ಮಾಡಿಲ್ಲ, ಪೊಲೀಸರಿಗೆ ಈಗಾಗಲೇ ಕಂಪ್ಲೇಂಟ್ ಕೊಟ್ಟಿದ್ದೇವೆ ಎಂದು ಸಹಾಯ ಕೇಳಿಕೊಂಡು ಬಂದಿದ್ದಾರೆ.ಅಂದು ಶುಕ್ರವಾರ ಆಗಿದ್ದರಿಂದ ಸಮುದಾಯದ ಎಲ್ಲಾ ಬಂಧುಗಳು ಮಸೀದಿಗೆ ನಮಾಜ್ ಗೆ ಬರುವರು ಎಂದು ಈ ಖತರ್ನಾಕ್ ಗಳಿಗೆ ಮೊದಲೇ ತಿಳಿದಿತ್ತು. ಅಂತೆಯೇ ಮಸೀದಿಗೆ ತೆರಳಿ ಸಹಾಯ ಯಾಚಿಸಿದಕ್ಕಾಗಿ ಧರ್ಮಗುರುಗಳು ತಮ್ಮ ಬಾಂಧವರಿಂದ ಅಲ್ಲೇ ಅಲ್ಪ ಸ್ವಲ್ಪ ಹಣ ಸಂಗ್ರಹಿಸಿ, ಊಟ ಉಪಚಾರ ಮಾಡಿ ರೈಲ್ವೆ ನಿಲ್ದಾಣಕ್ಕೂ ಬಿಟ್ಟುಬರುತ್ತಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಮೇಲೆ ಶ್ಲಾಘನೆ ವ್ಯಕ್ತವಾಗುತ್ತವೆ.
ಇದಾದ ಬಳಿಕ ಶುಕ್ರವಾರ ಇನ್ನೊಂದು ಮಸೀದಿಗೆ ತೆರಳಿದ ಈ ತಂಡ ಮತ್ತೆ ಅದೇ ರಾಗ ಹಾಡಿದೆ.ಒಂದು ಬಾರಿ ರೈಲು ಹತ್ತಲು ತೆರಳಿದ್ದ ತಂಡವು ಪುನಃ ಹಣ ಕಳೆದುಕೊಂಡಿದ್ದು ಹೇಗೆ? ಎಂಬೆಲ್ಲಾ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತದೆ. ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ ರೈಲು ನಿಲ್ದಾಣದಲ್ಲಿ ಹಣ ಕಳೆದುಕೊಂಡರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಕಳೆದ ಒಂದು ವಾರದಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಉತ್ತರ ಸಿಕ್ಕಿದಾಗ ಈ ಮಳ್ಳಿಯರ ನಿಜ ಬಣ್ಣ ಬಯಲಾಗಿದೆ. ಜನತೆಗೆ ಕರುಣೆ ಮೂಡಲು ನಕಲಿ ಕಂಪ್ಲೇಂಟ್ ಕಾಪಿ ಕೂಡಾ ಇವರಲ್ಲಿತ್ತು. ಸದ್ಯ ಇವರ ಬಗ್ಗೆ ಜನತೆ ಎಚ್ಚರಿಕೆಯಿಂದಿರಬೇಕಾಗಿದ್ದು, ಬುದ್ಧಿವಂತರನ್ನೇ ಮಂಗ ಮಾಡಿದ ಮಳ್ಳಿಯರಿಂದಾಗಿ ಸಹಾಯ ಮೆರೆದವರು,ಸಾಮಾಜಿಕ ಜಾಲತಾಣದಲ್ಲಿ ಸಹಾಯದ ಪೋಟೋ, ವೀಡಿಯೋ ಹಾಕಿ ಲೈಕ್ಸ್ ಪಡೆದವರು ಸದ್ಯ ಪೇಚಿಗೆ ಸಿಲುಕಿದ್ದಾರೆ.