ಕರಾವಳಿಯ 46 ಗ್ರಾಮ ಪಂಚಾಯತ್‌ಗಳು ‘ಅಮೃತ ಗ್ರಾಮೀಣ ವಸತಿ ಯೋಜನೆ’ಗೆ ಆಯ್ಕೆ | ಅದೆಷ್ಟೋ ಕರಾವಳಿಗರ ಸ್ವಂತ ಸೂರಿನ ಕನಸು ಇದೀಗ ನನಸು !!

Share the Article

ಕರಾವಳಿಯ ಸಾವಿರಾರು ಜನರ ಸ್ವಂತ ಸೂರಿನ ಕನಸು ನನಸಾಗುವ ಸಮಯ ಇದೀಗ ಸಮೀಪಿಸಿದೆ. ಪ್ರತಿಯೊಬ್ಬ ಅರ್ಹರಿಗೂ ನಿವೇಶನ, ವಸತಿ ನೀಡುವ ಗುರಿಯ “ಅಮೃತ ಗ್ರಾಮೀಣ ವಸತಿ ಯೋಜನೆ”ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 46 ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿವೆ.

ಈವರೆಗೆ ಸರಕಾರಗಳು ವಸತಿ ರಹಿತರು ಮತ್ತು ನಿವೇಶನ ರಹಿತರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ, ಗ್ರಾಮ ಪಂಚಾಯತ್ ವ್ಯಾಪ್ತಿಯೊಂದರ ಅರ್ಹರೆಲ್ಲರಿಗೂ ವಸತಿ, ನಿವೇಶನ ಒದಗಿಸುವ ಯೋಜನೆ ಇದೇ ಮೊದಲು. ಅಮೃತ ಗ್ರಾಮೀಣ ವಸತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 27, ಉಡುಪಿಯ 19 ಗ್ರಾಮ ಪಂಚಾಯತ್‌ಗಳು ಆಯ್ಕೆ ಆಗಿವೆ.

ದಕ್ಷಿಣ ಕನ್ನಡದಲ್ಲಿ ಆಯ್ಕೆಯಾಗಿರುವ ಗ್ರಾ. ಪಂಚಾಯತ್‌ಗಳಲ್ಲಿ 2,390 ಮಂದಿ ವಸತಿ ರಹಿತರಿದ್ದಾರೆ. 1,908 ಮಂದಿ ವಸತಿ, ನಿವೇಶನ ಎರಡೂ ಇಲ್ಲದವರು. ಉಡುಪಿ ಜಿಲ್ಲೆಯ 19 ಗ್ರಾಮ ಪಂಚಾಯತ್‌ಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ವಸತಿ/ನಿವೇಶನ ದೊರೆಯುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅರ್ಮಾಡಿ, ಕುಕ್ಕಿಪಾಡಿ, ಪಂಜಿಕಲ್ಲು, ಸರಪಾಡಿ, ಇಡ್ಮಿದು, ಇರಾ, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಮಡಂತ್ಯಾರು, ಕೊಕ್ಕಡ, ಉಜಿರೆ, ಹೊಸಂಗಡಿ, ಪಡಂಗಡಿ, ಕಡಬ ತಾಲೂಕಿನ ಅಲಂಕಾರು, ಎಡಮಂಗಲ, ಮಂಗಳೂರು ತಾಲೂಕಿನ ಮುನ್ನೂರು, ಐಕಳ, ಮುಚ್ಚಾರು, ಎಕ್ಕಾರು, ಮೂಡುಬಿದಿರೆ ತಾಲೂಕಿನ ಬೆಳುವಾಯಿ, ತೆಂಕಮಿಜಾರು, ಪುತ್ತೂರಿನ ನಿಡ್ನಳ್ಳಿ ,ಬಲ್ನಾಡು , ಪಾಣಾಜೆ, ಸುಳ್ಯದ ಬಾಳ್ತಿಲ, ಮರ್ಕಂಜ, ಮಂಡೆಕೋಲು ಗ್ರಾ.ಪಂ.ಗಳು ಆಯ್ಕೆಯಾಗಿವೆ.

ಉಡುಪಿ ಜಿಲ್ಲೆಯ 19 ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 750 ಗ್ರಾ.ಪಂ.ಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

Leave A Reply

Your email address will not be published.