ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್
ಮಂಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಕರೆ ಸದ್ದು ಮಾಡಿದೆ.
ಈ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಟ್ಟಾರಣ್ಯದಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಬೆಚ್ಚಿ ಬೀಳಿಸಿತ್ತು. ವಿದೇಶಕ್ಕೆ ಸತತ ಫೋನ್ ಕರೆ ಮಾಡಿರುವುದನ್ನು ಗುಪ್ತಚರ ಇಲಾಖೆ ಪತ್ತೆಹಚ್ಚಿತ್ತು. ಇದೀಗ ಮತ್ತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಕರೆ ಸದ್ದು ಮಾಡಿದೆ. ಈ ನಿಟ್ಟಿನಲ್ಲಿ ಗುಪ್ತಚರ ಇಲಾಖೆ ಅಲರ್ಟ್ ಆಗಿದ್ದು, ಪೂರಕ ಮಾಹಿತಿಯನ್ನು ಕಲೆ ಹಾಕುತ್ತಿದೆ.
ಸ್ಯಾಟಲೈಟ್ ಫೋನ್ ಕರೆಯ ಹಿನ್ನೆಲೆ ಯಲ್ಲಿ ಕೇಂದ್ರ ಗುಪ್ತಚರ ವಿಭಾಗ ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್ ಸೂಚನೆ ನೀಡಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ದ.ಕ., ಉ.ಕ., ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮತ್ತು ಮುಡಿಪು, ಚಿಕ್ಕಮಗಳೂರಿನ ಎರಡು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಒಂದು ವಾರದ ಹಿಂದೆ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿರುವ ಮಾಹಿತಿ ಗುಪ್ತಚರ ಇಲಾಖೆಗೆ ದೊರೆತಿದೆ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಸ್ಯಾಟಲೈಟ್ ಕರೆ ಸದ್ದು ಮಾಡಿದ್ದು, ಕೇಂದ್ರ ಗುಪ್ತಚರ ಇಲಾಖೆ ಈ ಬಗ್ಗೆ ನಿಗಾ ಇಟ್ಟಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಉಗ್ರರ ಸ್ಲಿಪರ್ ಸೆಲ್ ಆಗುತ್ತಿದೆ ಎಂಬ ಆತಂಕದ ನಡುವೆಯೇ ಸ್ಯಾಟ್‌ಲೈಟ್ ಫೋನ್ ರಿಂಗುಣಿಸಿರುವುದು ಕಳವಳದ ವಿಚಾರವಾಗಿದೆ. ಸ್ಯಾಟಲೈಟ್ ಫೋನ್ ಕರೆಯ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ತೀವ್ರ ನಿಗಾ ಇಟ್ಟಿದೆ.ಈ ನಡುವೆ ಮತ್ತೆ ಐದು ಕಡೆಗಳಲ್ಲಿ ಸ್ಯಾಟಲೈಟ್ ಕರೆ ಸದ್ದು ಮಾಡಿದೆ.