ಸರಸ್ವತಿ ಕಾಮತ್‌ಗೆ ಹಲ್ಲೆ ಪ್ರಕರಣ |
ಹರೀಶ್ ಕಂಜಿಪಿಲಿ ಸಹಿತ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯ ಕೋರ್ಟು ವಿಧಿಸಿದ್ದ ಶಿಕ್ಷೆಯ ತೀರ್ಪನ್ನು ಅಮಾನತುಗೊಳಿಸಿದ ಪುತ್ತೂರು ನ್ಯಾಯಾಲಯ
ಪುತ್ತೂರು : 2013ರ ವಿಧಾನಸಭಾ ಚುನಾವಣೆಯ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯ ಆಗಿನ ಬಿ.ಜೆ.ಪಿ. ಯುವ ನಾಯಕ, ಈಗಿನ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ಮರ್ಕಂಜದಲ್ಲಿ ಮಾಡಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಅಮಾನತು ಮಾಡಿದೆ.
2013 ಮೇ.4 ರಂದು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕುಕ್ಕುಳಿ ಎಂಬಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ ಆಗಿನ ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿತ್ತು. ಈ ಪ್ರಕರಣ ಸುಳ್ಯದ ಸೀನಿಯರ್ ಸಿವಿಲ್ ಜಡ್ಡರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸೆಪ್ಟೆಂಬರ್ 9ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಪ್ರಕರಣದ ಆರೋಪಿಗಳಾದ ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆನ್ನೂರು, ರಾಮಚಂದ್ರ ಹಲ್ಮಡ್ಕ, ಷಣ್ಮುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್. ಯಾನೆ ವಿಕಾಸ್‌ರವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಈ ತೀರ್ಪು ಘೋಷಿಸಿದ ಸುಳ್ಯ ನ್ಯಾಯಾಲಯವು ಆರೋಪಿಗಳಿಗೆ ಮೇಲ್ಮನವಿಗೆ 1ತಿಂಗಳ ಕಾಲಾವಕಾಶ ನೀಡಿತ್ತಲ್ಲದೆ ಅಲ್ಲಯೇ ಜಾಮೀನು ಮಂಜೂರು ಮಾಡಿತ್ತು.
ಇದೀಗ ಆರೋಪಿಗಳು ಪುತ್ತೂರಿನ ಅಡಿಶನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು ನ್ಯಾಯಾಲಯವು ಇವರ ವಿರುದ್ಧ ಸುಳ್ಯ ನ್ಯಾಯಾಲಯ ನೀಡಿರುವ ತೀರ್ಪನ್ನು ಅಮಾನತು ಮಾಡಿದೆಯಲ್ಲದೆ ಕೇಸಿಗೆ ಸಂಬಂಧಿಸಿದ ಕಡತಗಳನ್ನು ಪುತ್ತೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಸೂಚಿಸಿದೆ.