ಮುಕ್ಕೂರು : ಶಾಲಾ ಅಭಿವೃದ್ಧಿ ಸಮಿತಿ ರಚನೆ |
ಪಠ್ಯೇತರ ಚಟುವಟಿಕೆ ಅಳವಡಿಸಲು ನಿರ್ಧಾರ |
ದಾನಿಗಳಿಂದ 70 ಸಾವಿರ ರೂ.ಕೊಡುಗೆ ಘೋಷಣೆ

ಮುಕ್ಕೂರು: ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ರಚನೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಾಲೋಚನೆ ಸಭೆಯು ಅ.9 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು.  

 

ಊರಿನ ಬೇರೆ-ಬೇರೆ ಕ್ಷೇತ್ರದ ಸಾಧಕರು ಸಲಹೆ ಸೂಚನೆ ನೀಡಿ ಮಾದರಿ ಶಾಲೆಯಾಗಿ ರೂಪಿಸಲು ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಮುಂದಿನ ಕಾರ್ಯಚಟುವಟಿಕೆಗಾಗಿ ಸಭೆಯಲ್ಲಿಯೇ ಏಳು ದಾನಿಗಳು ತಲಾ 10 ಸಾವಿರ ರೂ.ನಂತೆ ಒಟ್ಟು 70 ಸಾವಿರ ರೂ. ನೀಡುವ ಘೋಷಣೆ ಮಾಡಿದರು.

ಮಂಗಳೂರು ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿರ್ದೇಶಕ ಕುಂಬ್ರ ದಯಾಕರ ಆಳ್ವ, ಮುಕ್ಕೂರು,ಶಾಲೆಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಊರಿನ ಮಕ್ಕಳು ಈ ಶಾಲೆಯಲ್ಲಿ ಕಲಿಯುವ ಹಾಗೆ ಅಗತ್ಯ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಮಕ್ಕಳ ಸಂಚಾರಕ್ಕೆ ವಾಹನ ವ್ಯವಸ್ಥೆ, ಅತಿಥಿ ಶಿಕ್ಷಕರ ನೇಮಕ, ಫಂಡ್ ರಚನೆ ಇತ್ಯಾದಿಗಳ ಬಗ್ಗೆ ಅವರು ಸಲಹೆ ಸೂಚನೆ ನೀಡಿದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಅಂಗನವಾಡಿ ಮತ್ತು ಶಾಲೆ ನಡುವೆ ಸಂವಹನ, ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ನಿರಂತರ ಚಟುವಟಿಕೆ ಹಮ್ಮಿಕೊಳ್ಳೋಣ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ವಾರ್ಷಿಕವಾಗಿ ಕೈಗೊಳ್ಳುವ ಚಟುವಟಿಕೆಗಳಿಗೆ ಆರ್ಥಿಕ ಕ್ರೋಢಿಕರಣದ ಅಗತ್ಯ ಇದೆ. ಅದನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡೋಣ. ಅನಂತರ ಪೂರಕ ಯೋಜನೆಗಳನ್ನು ಜಾರಿ ಮಾಡೋಣ ಎಂದರು.

ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಕಾಪು ಮಾತನಾಡಿ, ಮಕ್ಕಳು ಮುಕ್ಕೂರು ಶಾಲೆಗೆ ಬರುವಂತಾಗಲು ವ್ಯವಸ್ಥೆಗಳ ಬಗ್ಗೆ ಸ್ಪಂದನೆ ನೀಡೋಣ. ಹತ್ತಿರದ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆರನೇ ತರಗತಿಗೆ ಮುಕ್ಕೂರಿಗೆ ಸೇರ್ಪಡೆಯಾಗುವುದು, ಅಂಗನವಾಡಿ ಮಕ್ಕಳು ಇದೇ ಶಾಲೆಗೆ ಸೇರುವ ಬಗ್ಗೆ ಪೋಷಕರ ಜತೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ಮುಕ್ಕೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಯತೀಶ್ ಕಾನಾವುಜಾಲು, ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ, ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ಎಲ್ಲರನ್ನು ಜತೆ ಸೇರಿಸಿಕೊಂಡು ಮುಕ್ಕೂರು ಶಾಲಾ ಬೆಳವಣಿಗೆಗೆ ಹೆಜ್ಜೆ ಇಡಬೇಕು. ಧನಾತ್ಮಕ ನೆಲೆಯಲ್ಲಿ ಯೋಚಿಸಿ ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ಅನುಷ್ಠಾನಿಸೋಣ ಎಂದು ಅವರು ಹೇಳಿದರು.

70 ಸಾವಿರ ಘೋಷಣೆ

ಅಭಿವೃದ್ಧಿ ಸಮಿತಿ ಉದ್ದೇಶಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಪ್ರಥಮವಾಗಿ ಏಳು ದಾನಿಗಳು ತಲಾ 10 ಸಾವಿರ ರೂ.ನಂತೆ 70 ಸಾವಿರ ರೂ.ನೀಡುವ ಘೋಷಣೆ ಮಾಡಿದರು. ಕುಂಬ್ರ ದಯಾಕರ ಆಳ್ವ, ಸುಧಾಕರ ರೈ ಕುಂಜಾಡಿ, ಜಗನ್ನಾಥ ಪೂಜಾರಿ ಮುಕ್ಕೂರು, ಗಣೇಶ್ ಶೆಟ್ಟಿ ಕುಂಜಾಡಿ, ಯತೀಶ್ ಕಾನಾವುಜಾಲು, ಸಂತೋಷ್ ಕುಮಾರ್ ರೈ ಕಾಪು, ಲೋಕೇಶ್ ಬೀರುಸಾಗು ಅವರು ತಲಾ 10 ಸಾವಿರ ರೂ. ನೀಡುವ ಘೋಷಣೆ ಮಾಡಿದರು. ಉಳಿದಂತೆ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಊರ ದಾನಿಗಳನ್ನು ಸಂಪರ್ಕಿಸಿ ನೆರವು ನೀಡಲು ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು, ಶಾಲಾ ಎಸ್ಡಿಎಂಸಿ ಅದ್ಯಕ್ಷ ಜಯಂತ ಕುಂಡಡ್ಕ, ಮಾಜಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಗುಡ್ಡಪ್ಪ ಗೌಡ ಅಡ್ಯತಕಂಡ, ಲೋಕೇಶ್ ಬೀರುಸಾಗು, ಗಂಗಾಧರ, ಶ್ರೀಧರ ಕೊಂಡೆಪ್ಪಾಡಿ, ಚಂದ್ರಶೇಖರ ಬೀರುಸಾಗು, ಪುರುಷೋತ್ತಮ ಕುಂಡಡ್ಕ, ಶಾಲಾ ಮುಖ್ಯಗುರು ವಸಂತಿ, ಸಹ ಶಿಕ್ಷಕಿಯರಾದ ಆರತಿ, ಸೌಮ್ಯ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ, ಮಹೇಶ್ ಕುಂಡಡ್ಕ, ಅಂಗನವಾಡಿ ಕಾರ್ಯಕರ್ತೆ ರೂಪಾ, ರತ್ನಾವತಿ, ಕೆ.ಲಲಿತಾ, ತುಳಸಿ ಮೊದಲಾದವರು ಉಪಸ್ಥಿತರಿದ್ದರು. ಶಶಿಕುಮಾರ್ ಬಿ.ಎನ್.ಸ್ವಾಗತಿಸಿ, ನಿರೂಪಿಸಿದರು.

Leave A Reply

Your email address will not be published.