ಬೆಳ್ತಂಗಡಿ: ಮೆಸ್ಕಾಂ ಜಾಗೃತದಳದ ಅಧಿಕಾರಿಯೆಂದು ಮನೆ ಮನೆಗೆ ಭೇಟಿ | ಹಣಕ್ಕಾಗಿ ಪೀಡನೆ -ಪೊಲೀಸ್ ದೂರು
ಬೆಳ್ತಂಗಡಿ : ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ತಿರುಗಾಟ ಮಾಡುತ್ತಿದ್ದ ಕೊಯ್ಯೂರಿನ ವ್ಯಕ್ತಿಯೋರ್ವನ ವಿರುದ್ಧ ಮೆಸ್ಕಾಂ ಜೆ.ಇ.ಯವರು ಬೆಳ್ತಂಗಡಿ ಪೋಲಿಸ್ ಠಾಣೆಗೆ ಹಾಗೂ ಮಂಗಳೂರು ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ಅ.1ರಂದು ನಡೆದಿದೆ.
ಕೊಯ್ಯೂರಿನ ಪಾಂಬೇಲು ನಿವಾಸಿ ವಿವಾಹಿತ ಹರೀಶ್ ಯಾನೆ ಲೋಕೇಶ್ ಗೌಡ ಎಂಬವರ ಮೇಲೆ ಈ ಆರೋಪವನ್ನು ಹೊರಿಸಿ ದೂರನ್ನು ನೀಡಲಾಗಿದೆ. ಮಂಗಳೂರು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಈತ ಇತ್ತೀಚೆಗೆ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ವಿದ್ಯುತ್ ಹೊಂದಿರುವುದಾಗಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಗ್ರಾಹಕರು ನೀಡಿದ ಮಾಹಿತಿಯನ್ವಯ ಮೆಸ್ಕಾಂ
ಜೆ.ಇ.ಯವರು ಮಂಗಳೂರು ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳಿಗೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯ ಪ್ರವೃತರಾದ ಬೆಳ್ತಂಗಡಿ ಪೊಲೀಸರು ಹರೀಶ್ ಯಾನೆ ಲೋಕೇಶ್ ಗೌಡ ರವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು, ಈತ ನಕಲಿ ಮೆಸ್ಕಾಂ ಅಧಿಕಾರಿ ಎಂದು ತಿಳಿದುಬಂದಿದೆ. ಪೊಲೀಸರು ಆತನಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಆತನಿಂದ ಮುಚ್ಚಳಿಕೆ ಪತ್ರ ಬರೆಯಿಸಿ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.
ದೂರು ನೀಡಲಾಗಿದೆ: ಹರೀಶ್ ಯಾನೆ ಲೋಕೇಶ್ ಗೌಡ ರವರು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ ಕೊಯ್ಯರಿನ ಎರಡು ಮನೆಗಳಿಗೆ ಹೋಗಿ ತಾನು ಮೆಸ್ಕಾಂ ಇಲಾಖೆಯ ಅಧಿಕಾರಿ ಎಂದು ಹೇಳಿ ಮೆಸ್ಕಾಂನಿಂದ ಹಾಕಿದ ಮೀಟರ್ ಪರೀಕ್ಷೆ ಮಾಡಿದ ಬಗ್ಗೆ ಗ್ರಾಹಕರ ದೂರಿನ ಹಿನ್ನಲೆಯಲ್ಲಿ ಕೊಯ್ಯರು ವ್ಯಾಪ್ತಿಯ ಜೆ.ಇಯವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಇಲಾಖೆಯ ಮೇಲಾಧಿಕಾರಿಗಳಿಗೂ ದೂರು ನೀಡಲಾಗಿದೆ ಎಂದು ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶಂಕರ್ ತಿಳಿಸಿದ್ದಾರೆ.