ಕಡಲ ಕಿನಾರೆಯಲ್ಲಿರುವ ಟಗ್ ನೊಳಗಿಂದ ಕೇಳಿಬಂದಿದೆ ವಿಚಿತ್ರ ಸದ್ದು!! | ವ್ಯಕ್ತವಾಗುತ್ತಿದೆ ಪ್ರೇತ ಕಾಟದ ಶಂಕೆ ??!
ಸಮುದ್ರತೀರದಲ್ಲಿ ಫೋಟೋ ತೆಗೆಸಿಕೊಳ್ಳುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕಿನಾರೆಯಲ್ಲಿ ಹಳೆ ಬೋಟ್ ಗಳೆಲ್ಲ ಇದ್ದರೆ ಸಾಕು, ಅದರ ಮುಂದೆ ವಿವಿಧ ರೀತಿಯ ಪೋಸ್ ನೀಡಿ ಫೋಟೋ ತೆಗೆದುಕೊಳ್ಳವ ಹುಚ್ಚರ ಸಂಖ್ಯೆಯನ್ನು ಕಡಿಮೆ ಇಲ್ಲ. ಅಂತೆಯೇ ಫೋಟೋ ತೆಗೆಸಿಕೊಳ್ಳುತ್ತಿರುವಾಗ ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ.
ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಪಡುಬಿದ್ರಿ ಕಾಡಿಪಟ್ಟ ಕಡಲ ತೀರದಲ್ಲಿ ಸುಸ್ಥಿತಿಯಲ್ಲಿರಿಸಿದ ಟಗ್‌ನೊಳಗಡೆ ಅನಾಮಿಕ ವ್ಯಕ್ತಿ ನಡೆದಾಡುವ ಸಂಜ್ಞೆಯಿಂದ ಪಡುಬಿದ್ರಿಯ ಯುವಕರಿಬ್ಬರು ಭೀತಿಗೊಳಗಾದ ಘಟನೆ ನಡೆದಿದೆ.
ಕಡಲ ಕಿನಾರೆಗೆ ಆಗಮಿಸುವ ಜನ ಟಗ್ ಮುಂದೆ ನಿಂತು ಸೆಲ್ಸಿ ತೆಗೆದು ಸಂಭ್ರಮಿಸುತ್ತಿರುವುದು ಹಾಗೂ ಛಾಯಾಗ್ರಾಹಕರು ಜೋಡಿಗಳ ಛಾಯಾಗ್ರಹಣ ಮಾಡುತ್ತಿರುವುದು ಸಾಮಾನ್ಯ. ಮಂಗಳವಾರ ಸಾಯಂಕಾಲ ಪಡುಬಿದ್ರಿಯ ಇಬ್ಬರು ಯುವಕರು ಟಗ್ ಒರಗಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು.
ಆ ಸಂದರ್ಭದಲ್ಲಿ ಟಗ್‌ನೊಳಗೆ ವ್ಯಕ್ತಿಯೊಬ್ಬ ಚಲಿಸಿದಂತೆ ಭಾಸವಾಗಿದೆ. ಅದರಿಂದ ಬೆದರಿದ ಯುವಕ ಫೋಟೋ ತೆಗೆದುಕೊಳ್ಳುತ್ತಿದ್ದಾತನ ಬಳಿ ವಿಷಯ ತಿಳಿಸಿದಾಗ ಆತ ಅಲ್ಲಗಳೆದಿದ್ದ. ಮತ್ತೆ ಅನತಿ ದೂರದ ಬಂಡೆಕಲ್ಲಿನಲ್ಲಿ ಮತ್ತೊಬ್ಬನ ಚಿತ್ರ ತೆಗೆಯುವಾಗ ಆತನಿಗೂ ವ್ಯಕ್ತಿ ಟಗ್‌ನೊಳಗೆ ಹಾದುಹೋದ ಹಾಗೆ ಭಾಸವಾಗಿದೆ. ಯುವಕರಿಬ್ಬರು ಅದಕ್ಕೆ ಮೊದಲು ಟಗ್‌ನಿಂದ ದೂರದ ಸಮುದ್ರ ತೀರದ ಮರಳಲ್ಲಿ ಸತ್ತು ಬಿದ್ದಿರುವ ಮೀನನ್ನು ಗಮನಿಸುತ್ತಿದ್ದಾಗ ಕೂಗಿ ಕರೆಯುತ್ತಿದ್ದ ಶಬ್ದ ಕೇಳಿ ಬಂದಿರುವುದಾಗಿಯೂ ವಿವರಿಸಿದ್ದಾರೆ.
ಊಹಾಪೋಹ:
ಟಗ್ ದುರಂತಕ್ಕೀಡಾದಾಗ ಎಂಟು ಮಂದಿಯಲ್ಲಿ ಮೂವರು ನಾಪತ್ತೆಯಾಗಿದ್ದು, ಇಬ್ಬರ ಮೃತದೇಹ ಕಾರ್ಯಾಚರಣೆ ವೇಳೆ ಪತ್ತೆಯಾಗಿತ್ತು. ಇನ್ನೋರ್ವನ ದೇಹ ಪತ್ತೆಯಾಗಿಲ್ಲ. ಹೀಗಾಗಿ ಯುವಕರಲ್ಲಿ ಪ್ರೇತ ಕಾಟದ ಶಂಕೆ ಹುಟ್ಟಿಕೊಂಡಿದೆ. ಟಗ್ ಮೇಲೆ ಹತ್ತದಂತೆ ಸೂಚನಾ ಫಲಕ ಅಳವಡಿಸಿದ್ದರೂ, ಲೆಕ್ಕಿಸದೆ ಕೆಲವರು ಹತ್ತುತ್ತಿದ್ದಾರೆ. ಇದು ಇನ್ನೊಂದು ರೀತಿಯ ಶಂಕೆಗೂ ಕಾರಣವಾಗಿದೆ.