ಹೊಲದಲ್ಲಿ ಕಾಡುಹಂದಿಯಿಂದ ದಾಳಿಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು
ಕಾಡುಹಂದಿ ದಾಳಿಗೊಳಗಾದ ಮಹಿಳೆ ಮೃತಪಟ್ಟ ಘಟನೆ ಕೋಟ ಇಲ್ಲಿನ ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ರುಮನೆಬೆಟ್ಟು ಪ್ರದೇಶದಲ್ಲಿ ಬುಧವಾರ ನಡೆದಿದೆ.
ಮೃತ ಮಹಿಳೆಯನ್ನು ಕಮಲ ದೇವಾಡಿಗ (65) ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.
ಮಹಿಳೆಯು ವಡ್ಡರ್ಸೆ ಗ್ರಾಮದ ಕುದ್ರುಮನೆಬೆಟ್ಟು ಪ್ರದೇಶದ ಭತ್ತದ ಗದ್ದೆ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಕಾಡು ಹಂದಿ ಹಿಂದಿನಿಂದ ದಾಳಿಗೈದ ಪರಿಣಾಮ ದೇಹದ ಹೆಚ್ಚಿನ ಭಾಗಗಳ ಮೂಳೆ ಮೂರಿತಕ್ಕೊಳಗಾಗಿದ್ದು ಮಹಿಳೆಯನ್ನು ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹಲವು ವರ್ಷಗಳಿಂದ ಎಚ್ಚರಿಸಿದರೂ ಪ್ರಯೋಜನ ಶೂನ್ಯ!
ಹಂದಿ ಉಪಟಳ ಈ ಭಾಗದಲ್ಲಿ ಅತಿಯಾಗಿ ಕಾಣಿಸಿಕೊಂಡಿದ್ದು, ಇಲ್ಲಿನ ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತಿದೆ, ಈ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿ ಇಲಾಖೆಯನ್ನು ಎಚ್ಚರಿಸಿದರೂ ಅದರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಈ ರೀತಿಯ ಸನ್ನಿವೇಶಗಳು ಸೃಷ್ಟಿಯಾಗಿವೆ ಎಂಬ ಮಾತುಗಳು ಕೇಳಿಬಂದಿವೆ, ಒಂದೆಡೆ ಕೃಷಿಗೆ ಕಂಟಕವಾಗಿ ಪರಿಣಮಿಸಿದರೆ ಇತ್ತ ಮನುಷ್ಯನ ಪ್ರಾಣಕ್ಕೂ ಕುತ್ತಾಗಿ ಕಂಡಿದೆ. ಇಷ್ಟಾಗಿಯೂ ಈ ಬಗ್ಗೆ ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ನಿರಾಸಕ್ತಿ ವಹಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿವೆ.
ಹಂದಿ ಉಪಟಳದ ಬಗ್ಗೆ ಸಾರ್ವಜನಿಕರು ಸ್ಥಳೀಯಾಡಳಿತಕ್ಕೆ ಎಚ್ಚರಿಸಿದರೂ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ಸ್ಥಳೀಯಾಡಳಿತದ ವಿರುದ್ಧ ಅಲ್ಲಿನ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಶೀಘ್ರದಲ್ಲಿ ಇದಕ್ಕೊಂದು ಪರಿಹಾರ ಕಾಣದಿದ್ದರೆ ಹೋರಾಟದ ಹಾದಿ ತುಳಿಯಬೇಕಾದಿತು ಎಂದು ಎಚ್ಚರಿಸಿದ್ದಾರೆ.
ಇಲ್ಲಿನ ಕೋಟ ಗ್ರಾಮಪಂಚಾಯತ್‌ನ ಮೂಡುಗಿಳಿಯಾರು ಭಾಗದಲ್ಲಿ ಇದೇ ರೀತಿ ಪರಿಸ್ಥಿತಿ ಪ್ರತಿವರ್ಷ ಸೃಷ್ಟಿಯಾಗುತ್ತಿದೆ. ಅಲ್ಲಿನ ಸಾಕಷ್ಟು ಕೃಷಿ ಭೂಮಿ ಹಾನಿಗೊಳಿಸಿದ್ದಲ್ಲದೆ ಓರ್ವ ವ್ಯಕ್ತಿಗೆ ಹಂದಿ ಗುದ್ದಿದ ಪರಿಣಾಮ ಭಾರಿ ಪ್ರಮಾಣದ ಗಾಯಗಳಾಗಿ ಗುಣಮುಖರಾದ ಘಟನೆ ಕಣ್ಮುಂದಿರುವಾಗಲೇ ಇದೀಗ ಮತ್ತೊಂದು ಘಟನೆ ಅಲ್ಲೆ ಸಮೀಪದ ಗ್ರಾಮಪಂಚಾಯತ್‌ನಲ್ಲಿ ನಡೆದಿದೆ.