ಜನರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ಅಡುಗೆ ಅನಿಲ ಬೆಲೆ ಏರಿಕೆಯ ಬರೆ !! | 15 ರೂ. ಏರಿಕೆಯಾಗಿ ಶಾಕ್ ನೀಡಿದ ಎಲ್‍ಪಿಜಿ

Share the Article

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ಇನ್ನೊಂದು ಬೆಲೆಯೇರಿಕೆಯ ಬರೆ ಬಿದ್ದಿದೆ. ಇದೀಗ ತೈಲ ಕಂಪೆನಿಗಳು ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಿವೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ, ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಿಸಿದೆ.

ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಕಾಣುವ ಮೂಲಕ ದೇಶದಾದ್ಯಂತ ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಮೂಲಕ ಗೃಹಬಳಕೆ ಸಿಲಿಂಡರ್ ದರ 900ರ ಸಮೀಪಕ್ಕೆ ಬಂದಿದೆ.

ಈಗಾಗಲೇ ಸಿಲಿಂಡರ್ ದರ 15 ರೂ. ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ 902.2ರೂ ಆಗಲಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ ಆಗಿದೆ. 5 ಕೆಜಿ ಸಿಲಿಂಡರ್ ದರ 502ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಪೆಟ್ರೋಲ್ ಲೀಟರ್‌ಗೆ 30 ಪೈಸೆ ಏರಿಕೆ ಕಂಡು 102ರೂ ಗಡಿದಾಟಿದೆ. ಡಿಸೇಲ್ ಪ್ರತಿ ಲೀಟರ್‌ಗೆ 34-37 ಪೈಸೆ ಏರಿಕೆ ಕಂಡು 91.42ರೂಪಾಯಿ ತಲುಪಿದೆ.

ಕೊರೋನಾ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಈ ರೀತಿಯ ಬೆಲೆಯೇರಿಕೆಗಳು ಮತ್ತೆ ಜನರ ಜೀವನಕ್ಕೆ ಬರೆ ಹಾಕುತ್ತಿವೆ. ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಜನರು ತುಂಬಾ ಪರದಾಡುತ್ತಿದ್ದಾರೆ. ಇದೀಗ ಮತ್ತೆ ಅಡುಗೆ ಅನಿಲ ಬೆಲೆ ಏರಿಕೆ ಆಗಿರುವುದರಿಂದ ಜನರು ಮತ್ತಷ್ಟು ಕಷ್ಟಕ್ಕೆ ಗುರಿಯಾಗಿದ್ದಾರೆ.

Leave A Reply