ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ | ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಎಫ್ಐಆರ್ ದಾಖಲು
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ- ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಮೂಲದ ವಕೀಲ ಸಂತೋಷ್ ದುಬೆ ನೀಡಿದ ದೂರಿನ ಆಧಾರದ ಮೇಲೆ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು,ಐಪಿಸಿ ಸೆಕ್ಷನ್ 500 ರ ಮಾನನಷ್ಟಕ್ಕಾಗಿ ಶಿಕ್ಷೆ ಅಡಿಯಲ್ಲಿ ಎಫ್ ಐಆರ್ ದಾಖಲಾಗಿರುವುದಾಗಿ ಮುಲುಂಡ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಟಿವಿ ಚಾನಲ್ ವೊಂದರ ಸಂದರ್ಶನದಲ್ಲಿ ಆರ್ ಎಸ್ ಎಸ್ ವಿರುದ್ಧ ಸುಳ್ಳು, ಅವಹೇಳನಕಾರಿ ಹೇಳಿಕೆ ನೀಡಿಕೆ ಆರೋಪದ ಮೇರೆಗೆ ಜಾವೇದ್ ಅಖ್ತರ್ ಅವರಿಗೆ ಕಳೆದ ತಿಂಗಳು ವಕೀಲ ಸಂತೋಷ್ ದುಬೆ ಕಾನೂನಿನ ನೋಟಿಸ್ ವೊಂದನ್ನು ಕಳುಹಿಸಿ, ಕ್ಷಮೆ ಯಾಚಿಸುವಂತೆ ಕೋರಿದ್ದರು.
ಜಾವೇದ್ ಅಖ್ತರ್, ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ತಾಲಿಬಾನ್ ನೊಂದಿಗೆ ಹಿಂದೂ ಬಲಪಂಥೀಯರನ್ನು ಹೋಲಿಕೆ ಮಾಡಿದ್ದರು.ಜಾವೇದ್ ಅಖ್ತರ್ ಇಂತಹ ಹೇಳಿಕೆ ನೀಡುವ ಮೂಲಕ ಐಪಿಸಿ ಸೆಕ್ಷನ್ 499ರ ಮಾನಹಾನಿ ಮತ್ತು 500ರ ಮಾನಹಾನಿಗೆ ಶಿಕ್ಷೆ ಅಡಿಯಲ್ಲಿ ಅಪರಾಧ ಮಾಡಿರುವುದಾಗಿ ದುಬೆ ನೋಟಿಸ್ ನಲ್ಲಿ ಹೇಳಿದ್ದರು. ಹೇಳಿಕೆ ಕುರಿತಂತೆ ಕ್ಷಮೆಯಾಚಿಸುವಂತೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ, ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ನನ್ನ ದೂರಿನ ಆಧಾರದ ಮೇಲೆ ಇದೀಗ ಎಫ್ ಐಆರ್ ದಾಖಲಿಸಲಾಗಿದೆ ಎಂದು ವಕೀಲರು ಪಿಟಿಐಗೆ ತಿಳಿಸಿದ್ದಾರೆ.