ಕರ್ನಾಟಕದ ನೂತನ ಜಿಲ್ಲೆ ವಿಜಯನಗರ ಉದ್ಘಾಟನೆ | 31ನೇ ಜಿಲ್ಲೆಯಾಗಿ ಮುಖ್ಯಮಂತ್ರಿ ಅವರಿಂದ ಉದ್ಘಾಟನೆ
ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಿಸಲಾಗಿದ್ದು, ನೂತನ ಜಿಲ್ಲೆಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ವಿಜಯನಗರ ಜಿಲ್ಲೆಯ ವಿಜಯಸ್ತಂಭವನ್ನು ಅನಾವರಣಗೊಳಿಸಲಾಗಿದೆ.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೊದಲು ಬಳ್ಳಾರಿಗೆ ಸೇರಿದ್ದ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ವಿಜಯನಗರ ನೂತನ ಜಿಲ್ಲೆಯಲ್ಲಿ ಇರಲಿವೆ.
ಬಳ್ಳಾರಿ ಜಿಲ್ಲೆಯಿಂದ ವಿಭಜನೆ ಮಾಡಿ ವಿಜಯನಗರ ಎಂಬ ಪ್ರತ್ಯೇಕ ಜಿಲ್ಲೆಯನ್ನು ರಚಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಜಿಲ್ಲೆಯನ್ನಾಗಿ ವಿಜಯನಗರವನ್ನು ಘೋಷಿಸಿ ಆದೇಶ ಹೊರಡಿಸಿತ್ತು. ಗಾಂಧಿ ಜಯಂತಿಯ ದಿನವಾದ ಇಂದು ವಿಜಯನಗರ ನೂತನ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲೆಗೆ ಹೊಸ ಸಿಇಓ ಆಗಿ ಕೆ.ಎಂ. ಗಾಯತ್ರಿ ಅವರನ್ನು ನೇಮಕ ಮಾಡಲಾಗಿದೆ.ಕೆ.ಎಂ. ಗಾಯತ್ರಿ ಅವರು ಈ ಹಿಂದೆ ಮೈಸೂರಿನ ANSSIRD ನಿರ್ದೇಶಕರಾಗಿದ್ದರು. ಹಾಗೇ, ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ಅವರನ್ನು ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಮತ್ತು ಎಸ್ಪಿಯಾಗಿ ಡಾ. ಅರುಣ್. ಕೆ ಅವರನ್ನು ನೇಮಕ ಮಾಡಲಾಗಿದೆ