ಬಂಟ್ವಾಳ : ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪರಿಶೀಲನೆ | ಅ.4ರಂದು ಬಂಟವಾಳದ ಬಂಟರ ಭವನದಲ್ಲಿ ಅಂತ್ಯೋದಯ ಸಮಾವೇಶ

ಬಂಟ್ವಾಳ: ದ.ಕ. ಜಿಲ್ಲಾಡಳಿತ, ಜಿ.ಪಂ., ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅ. 4ರಂದು ಬಿ.ಸಿ.ರೋಡ್‌ನ‌ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿರುವ ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭವನವನ್ನು ವೀಕ್ಷಿಸಿ ಅಧಿಕಾರಿಗಳು ಹಾಗೂ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.

 

ಈ ವೇಳೆ ಮಾತನಾಡಿದ ಅವರು, ಇಲಾಖೆಗಳ ಮಾಹಿತಿಗಳು ಮಧ್ಯವರ್ತಿಗಳ ಕಾಟವಿಲ್ಲದೆ ತಳಮಟ್ಟದ ಜನತೆಗೆ ತಲುಪ ಬೇಕಾದರೆ ಚುನಾಯಿತ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಅವಧಿ ಮುಗಿದರೂ ಜಿ.ಪಂ., ತಾ.ಪಂ. ಸದಸ್ಯರನ್ನೂ ಅಹ್ವಾನಿಸಲಾಗಿದೆ ಎಂದರು.

ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಲಿದೆ. ಈ ಸಮಾವೇಶವನ್ನು ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಸಲಾಗಿದ್ದು, ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿದೆ. ಅಕ್ಟೋಬರ್‌ ಅಂತ್ಯದೊಳಗೆ 10 ಜಿಲ್ಲೆಯಲ್ಲಿ ಅಂತ್ಯೋದಯ ಸಮಾವೇಶ ನಡೆಸುವ ಯೋಚನೆ ಇದೆ ಎಂದರು.

ಪ್ರತಿನಿಧಿಗಳ ನೋಂದಣಿ, ಪಾರ್ಕಿಂಗ್‌ ವ್ಯವಸ್ಥೆ, ಸತ್ಕಾರ, ಊಟೋಪಚಾರ, ಸಭಾಂಗಣಗಳನ್ನು ಪರಿಶೀಲಿಸಿ ಸಿದ್ಧತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಮಾಜ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕ ಯೋಗೀಶ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ಕುಮಾರ್‌ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ನೋಡಲ್‌ ಅಧಿಕಾರಿ ಚಂದ್ರ ನಾಯ್ಕ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ, ತಾ.ಪಂ. ಮಾಜಿ ಸದಸ್ಯರಾದ ಗಣೇಶ್‌ ಸುವರ್ಣ, ಸೋಮಪ್ಪ ಕೋಟ್ಯಾನ್‌, ಬಿಜೆಪಿ ಪ್ರಮುಖರಾದ ರವೀಶ್‌ ಶೆಟ್ಟಿ ಕರ್ಕಳ, ಡೊಂಬಯ ಅರಳ, ಪ್ರದೀಪ್‌ ಅಜ್ಜಿಬೆಟ್ಟು, ಪವನ್‌ ಕುಮಾರ್‌ ಶೆಟ್ಟಿ, ನಂದರಾಮ ರೈ ಮೊದಲಾದವರು ಉಪಸ್ಥಿತರಿದ್ದ‌ರು.

Leave A Reply

Your email address will not be published.