ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ |
ವಾಹನ ಪರವಾನಿಗೆ ಸೇರಿದಂತೆ ವಾಹನಗಳ ದಾಖಲೆಗಳ ಮಾನ್ಯತಾ ಅವಧಿ ಅ. 31 ರವರೆಗೆ ವಿಸ್ತರಣೆ
ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ವಾಹನ ದಾಖಲೆಗಳ ಅವಧಿಯನ್ನು ಅಕ್ಟೋಬರ್ 31, 2021 ರವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಗುರುವಾರ ಈ ಆದೇಶ ಹೊರಡಿಸಿದ್ದು, ವಾಹನ ಚಾಲನಾ ಪರವಾನಗಿ, ನೋಂದಣಿ ಪ್ರಮಾಣ ಪತ್ರ ಹಾಗೂ ಇತರೆ ಪರವಾನಗಿ ಒಳಗೊಂಡಂತೆ ಮೋಟಾರು ವಾಹನ ದಾಖಲೆಗಳ ಸಿಂಧುತ್ವವನ್ನು ಕೇಂದ್ರ ಸರ್ಕಾರ ಅಕ್ಟೋಬರ್ 31, 2021ರವೆಗೂ ವಿಸ್ತರಣೆ ಮಾಡಿರುವುದಾಗಿ ಮಾಹಿತಿ ನೀಡಿದೆ.
ಕೊರೊನಾ ಸಾಂಕ್ರಾಮಿಕವನ್ನು ಗಮನಲ್ಲಿಟ್ಟುಕೊಂಡು ಈ ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಅಕ್ಟೋಬರ್ 31ರವರೆಗೆ ಫಿಟ್ನೆಸ್, ಎಲ್ಲಾ ವಿಧದ ವಾಹನ ಪರವಾನಗಿ ಹಾಗೂ ನೋಂದಣಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸಚಿವಾಲಯ ಸೂಚನೆ ನೀಡಿದೆ.
ದೇಶದಾದ್ಯಂತ ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಷರತ್ತುಗಳ ಕಾರಣದಿಂದಾಗಿ ಕಠೋರ ಪರಿಸ್ಥಿತಿ ಮುಂದುವರಿದಿದೆ. ಈ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಮೇಲೆ ಉಲ್ಲೇಖಿಸಿದ ಎಲ್ಲಾ ದಾಖಲೆಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಲಾಕ್‌ಡೌನ್ ಕಾರಣವಾಗಿ ಪರವಾನಗಿಯನ್ನು ನವೀಕರಿಸದ ಅಥವಾ ವಿಸ್ತರಣೆ ಮಾಡಲು ಸಾಧ್ಯವಾಗದ ಕಾರಣ ಫೆಬ್ರವರಿ 1, 2020ಗೆ ಅಂತ್ಯವಾಗುವ ಪರವಾನಗಿಯನ್ನು ಅಕ್ಟೋಬರ್ 31ರವರೆಗೂ ಮಾನ್ಯ ಮಾಡಲು ಪರಿಗಣಿಸಬಹುದು ಎಂದು ಹೇಳಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 2020ರೊಳಗೆ ಅವಧಿ ಮುಗಿದ ಅಥವಾ ಅಕ್ಟೋಬರ್ 31, 2021 ಒಳಗೆ ಮುಕ್ತಾಯಗೊಳ್ಳಲಿರುವ ದಾಖಲೆಗಳಿಗೆ ಮಾನ್ಯತೆ ನೀಡಲಾಗಿದೆ.
ದೇಶಾದ್ಯಂತ ಲಾಕ್‌ಡೌನ್ ಇದ್ದ ಕಾರಣ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಸ್ಥಗಿತವಾಗಿತ್ತು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಹಾಗೂ ಸಾರಿಗೆ ಸಂಬಂಧಿ ಸೇವೆಗಳಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಆದೇಶವನ್ನು ಜಾರಿಗೊಳಿಸಬೇಕು. ಈ ಕಷ್ಟದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು, ಸಾಗಣಿಕೆದಾರರು ಹಾಗೂ ವಿವಿಧ ಸಂಸ್ಥೆಗಳಿಗೆ ತೊಂದರೆಯಾಗುವುದನ್ನು ತಡೆಯಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ಕಳೆದ ಮಾರ್ಚ್, ಜೂನ್, ಆಗಸ್ಟ್, ಡಿಸೆಂಬರ್ ಹಾಗೂ ಈ ವರ್ಷದ ಮಾರ್ಚ್, ಜೂನ್‌ನಲ್ಲಿ ವಿಸ್ತರಣೆ ಮಾಡಿತ್ತು. ಈ ವರ್ಷ ಜೂನ್ ತಿಂಗಳಿನಲ್ಲಿ ಕೊನೆಯದಾಗಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಮೋಟಾರು ವಾಹನ ನಿಯಮ 1988 ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಡಿಯಲ್ಲಿ ವಿಸ್ತರಣೆ ಮಾಡಲಾಗಿದೆ.
ಮಾರ್ಚ್ 24, 2020ರ ಬಳಿಕ ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದು, ಅತ್ಯವಶ್ಯಕ ಸರಕು ಹಾಗೂ ಸೇವೆ ಒದಗಿಸುವ ಉದ್ದೇಶದಿಂದ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಲವು ಬಾರಿ ನಿರ್ದೇಶನಗಳನ್ನು ಜಾರಿಗೊಳಿಸಿತ್ತು. ಆ ಅವಧಿಯಲ್ಲಿ ಸಂಚಾರ ಇಲಾಖೆಯೂ ಸಂಪೂರ್ಣ ಬಂದ್ ಆಗಿದ್ದು, ಡಿಎಲ್, ಎಲ್‌ಎಲ್ ಪ್ರಕ್ರಿಯೆ ಮಾಡದಿರಲು ನಿರ್ಧರಿಸಲಾಗಿತ್ತು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಕೊರೊನಾ ಸೋಂಕಿನ ಕಾರಣವಾಗಿ ವಾಹನ ದಾಖಲೆಗಳ ಮಾನ್ಯತೆಯ ಅವಧಿಯನ್ನು ಕಳೆದ ವರ್ಷದಿಂದ ಏಳು ಬಾರಿ ವಿಸ್ತರಣೆ ಮಾಡಲಾಗಿದೆ. ಇದೀಗ ಅಕ್ಟೋಬರ್ 31ರವರೆಗೂ ಮತ್ತೊಮ್ಮೆ ವಿಸ್ತರಿಸಲಾಗಿದೆ.