ಮತ್ತೆ ಮರುಕಳಿಸುತ್ತಿದೆ ಪ್ರಾಣಿಗಳ ಮಾರಣಹೋಮ | 16 ಕೋತಿಗಳನ್ನು ಕೊಂದು ಮೂಟೆಗಳಲ್ಲಿ ತಂದು ಬಿಸಾಡಿದ ದುಷ್ಕರ್ಮಿಗಳು
ಮೂಕ ಪ್ರಾಣಿಗಳು ಮನುಷ್ಯರಂತೆಯೇ ಜೀವಿಗಳು. ಅವುಗಳ ರಕ್ಷಣೆ ನಮ್ಮಿಂದಾಗಬೇಕೇ ವಿನಃ ವಿನಾಶ ಅಲ್ಲ.ಇತ್ತೀಚೆಗೆ ಹಾಸನದಲ್ಲಿ ಕೋತಿಗಳ ಮಾರಣಹೋಮ ಪ್ರಕರಣ, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲು ಇಂತದ್ದೇ ಘಟನೆ ನಡೆಯುವ ಮೂಲಕ, ಮನುಷ್ಯರು ಮತ್ತೊಮ್ಮೆ ಮೃಗಗಳಂತೆ ವರ್ತಿಸಿದ್ದಾರೆ.
ಕೋಲಾರ ನಗರ ಹೊರವಯದ ಟಮಕ ನಿರ್ಜನ ಪ್ರದೇಶದಲ್ಲಿ 16 ಕೋತಿಗಳ ಶವಗಳು ಪತ್ತೆಯಾಗಿದೆ, ಬೇರೆಕಡೆ ಕೋತಿಗಳಿಗೆ ವಿಷಪ್ರಾಸನ ಮಾಡಿ ಕೊಂದಿರುವ ದುಷ್ಕರ್ಮಿಗಳು, ಮೂರು ಮೂಟೆಗಳಲ್ಲಿ ಕೋತಿಗಳ ಶವಗಳನ್ನ ತಂದು ಬಿಸಾಡಿ ಹೋಗಿದ್ದಾರೆ.
ಬುಧವಾರ ಬೆಳಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ತಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಕೋತಿಗಳ ಶವಗಳನ್ನು ಕೋಲಾರದ ಮಡೇರಹಳ್ಳಿ ಅರಣ್ಯ ಪ್ರದೇಶಕ್ಕೆ ರವಾನಿಸಿ, ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸಿದರು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದಹನ ಸಂಸ್ಕಾರ ಮಾಡಲಾಯಿತು.
ಕೋತಿಗಳ ಮಾರಣಹೋಮದ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಪ ಅರಣ್ಯಾಧಿಕಾರಿ ಇ.ಶಿವಶಂಕರ್ ಅವರು, ಕೋತಿಗಳ ಸಾವು ಮೇಲ್ನೋಟಕ್ಕೆ ಸಹಜವಾಗಿಲ್ಲ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕೋತಿಗಳನ್ನ ಗಮನಿಸಿದಾಗ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳು ಇಲ್ಲ, ಜೊತೆಗೆ ಹಲ್ಲೆಯಾಗಿರುವ ಗಾಯಗಳು ಕಂಡುಬಂದಿಲ್ಲ, ಆದರೆ ಕೋತಿಗಳ ಮುಖ ಕೆಂಪು ಬಣ್ಣಕ್ಕೆ ತಿರುಗಿದ್ದು ಕಂಡುಬಂದಿದೆ, ಹೀಗಾಗಿ ಕೋತಿಗಳಿಗೆ ವಿಷಪ್ರಾಸನ ಮಾಡಿರುವ ಸಾಧ್ಯತೆಯಿದೆ ಎಂದಿದ್ದಾರೆ. ರೈತರ ತೋಟಗಳಲ್ಲಿ ಔಷಧಿ ಸೇವಿಸಿದ ಕೆಲವು ಕೋತಿಗಳು ಸಾಯಬೇಕಿತ್ತು, ಆದರೆ 16 ಕೋತಿಗಳು ಒಟ್ಟಿಗೆ ಸಾವನ್ನಪ್ಪಿರುವ ಕಾರಣ ಇದು ಸಹಜ ಸಾವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.