ಮಂಗಳೂರು ನಗರ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಭರ್ಜರಿ ಕಾರ್ಯಾಚರಣೆ | ಈ ನಡುವೆ ಎಸಿಪಿ ಕಾರಿನ ನಂಬರ್ ಪ್ಲೇಟೇ ಕಾನೂನುಬಾಹಿರ ?! | ಪೇಚಿಗೆ ಸಿಲುಕಿದ ಪೊಲೀಸರು !!

Share the Article

ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ.

ಎರಡು ದಿನದಲ್ಲಿ ಬರೋಬ್ಬರಿ ಏಳು ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಆದರೆ ದುರಂತ ಏನೆಂದರೆ ಸಿಕ್ಕಸಿಕ್ಕವರ ವಾಹನವನ್ನು ತಡೆದು ನಿಲ್ಲಿಸಿದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ‌. ನಟರಾಜ್‌ರವರ ಸರ್ಕಾರಿ ಕಾರಿನಲ್ಲೇ ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದಿರುವುದು ಪೊಲೀಸ್ ಇಲಾಖೆಗೆ ತೀವ್ರ ಪೇಚುಗೀಡು ಮಾಡಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ನಿರ್ದೇಶನದಂತೆ, ಒಂದು ವಾರಗಳ ಕಾಲ ಮಂಗಳೂರು ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಮಾಡಲಿದ್ದಾರೆ.
ಸೋಮವಾರ ಟಿಂಟೆಡ್ ಗ್ಲಾಸ್ ಹೊಂದಿದ ಕಾರುಗಳ ಮೇಲೆ ಕಾರ್ಯಾಚರಣೆ ಮಾಡಿದರೆ, ಮಂಗಳವಾರ ವಾಹನಗಳ ನಂಬರ್ ಪ್ಲೇಟ್ ಅಭಿಯಾನ ಮಾಡಲಾಗಿದೆ.

ಇನ್ನು ಬುಧವಾರ ಹೆಲ್ಮೆಟ್ ಹಾಕದಿರುವವರ ಬಗ್ಗೆ ಪೊಲೀಸರು ಕಾರ್ಯಾಚರಣೆ ಮಾಡಿದರೆ, ಗುರುವಾರ ಇನ್ಶುರೆನ್ಸ್ ಹೊಂದಿರದ ವಾಹನಗಳ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಲಿದ್ದಾರೆ. ಶುಕ್ರವಾರ ಹಳೇ ಕೇಸ್‌ಗಳ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ತಯಾರಾದರೆ, ಶನಿವಾರ ಎಮಿಶನ್ ಸರ್ಟಿಫಿಕೇಟ್ ಇಲ್ಲದ ವಾಹನಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಾಚರಣೆ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್ ನೇತೃತ್ವದಲ್ಲಿ ನಡೆಯಲಿದೆ.

Leave A Reply