ನೀವು ಪ್ರತಿದಿನವೂ ತಲೆಗೆ ಸ್ನಾನ ಮಾಡುತ್ತೀರಾ? | ಪ್ರತಿದಿನವೂ ತಲೆಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಅಥವಾ ಕೆಟ್ಟದ್ದೇ ?? | ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಹಿಂದೂ ಸನಾತನ ಧರ್ಮದಲ್ಲಿ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನಾನವನ್ನು ಮನುಷ್ಯನ ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಸ್ನಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ದೇಹ ಶುದ್ಧವಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮನಸ್ಸು ಶುದ್ಧವಾಗಿದ್ದಾಗ ವ್ಯಕ್ತಿಯ ಆಲೋಚನೆಗಳು ಶುದ್ಧವಾಗಿರುತ್ತದೆ ಮತ್ತು ಆಲೋಚನೆಗಳು ಶುದ್ಧವಾಗಿದ್ದಾಗ ವ್ಯಕ್ತಿಯ ಕ್ರಿಯೆಗಳು ಶುದ್ಧವಾಗುತ್ತವೆ ಎಂಬ ನಂಬಿಕೆ ಇದೆ.

 

ಹಾಗೆಯೇ, ಪ್ರತಿದಿನ ಎಲ್ಲರೂ ಸ್ನಾನ ಮಾಡುತ್ತೇವೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದರೆ, ಇನ್ನು ಕೆಲವರು ರಾತ್ರಿ ಸ್ನಾನ ಮಾಡುತ್ತಾರೆ. ಕೆಲವರಿಗಂತೂ ರಾತ್ರಿ ಸ್ನಾನ ಮಾಡದಿದ್ದರೆ ನಿದ್ದೆಯೇ ಬರುವುದಿಲ್ಲ. ದೇಹವನ್ನು ಶುಚಿಯಾಗಿಟ್ಟುಕೊಳ್ಳಲು ಸ್ನಾನ ಮುಖ್ಯ, ಅದು ಆರೋಗ್ಯವಂತ ಅಭ್ಯಾಸ ಕೂಡಾ ಹೌದು.

ಕೆಲವು ತಜ್ಞರು ಹೇಳುವ ಪ್ರಕಾರ ದಿನಕ್ಕೆ ಎರಡು ಸಲ ಸ್ನಾನ ಮಾಡುವುದು ಒಳ್ಳೆಯದಲ್ಲವಂತೆ. ನಮ್ಮ ದೇಹದ ರೋಗನಿರೋಧಕ ಶಕ್ತಿ ಇದರಿಂದ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ಬಾರಿ ಸ್ನಾನ ಮಾಡಿದರೆ ಸಾಕು ಎಂದು ಹೇಳುತ್ತಾರೆ ತಜ್ಞರು.

ಅದಲ್ಲದೆ, ಊಟವಾದ ನಂತರ ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು. ಊಟಕ್ಕೆ ಮೊದಲೇ ಸ್ನಾನ ಮುಗಿಸಿರಬೇಕು. ಅದಕ್ಕೆ ಹಿರಿಯರು ಸ್ನಾನ ಮುಗಿಸಿದ ನಂತರ ಊಟಕ್ಕೆ ಬರಬೇಕು ಎನ್ನುತ್ತಾರೆ

ಪ್ರತಿದಿನ ತಲೆಗೆ ಸ್ನಾನ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಅದರಲ್ಲೂ ಗಂಡಸರಲ್ಲಿ ಈ ಅಭ್ಯಾಸ ಸರ್ವೇ ಸಾಮಾನ್ಯ. ಶ್ಯಾಂಪೂ ಅಥವಾ ಸೋಪು ಬಳಸಿ ತಲೆಕೂದಲನ್ನು ಪ್ರತಿದಿನ ತೊಳೆಯುತ್ತಾರೆ. ಆದರೆ ಪ್ರತಿದಿನ ತಲೆಗೆ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

ಪ್ರತಿದಿನ ಧೂಳಿನ ನಡುವೆ ಅಥವಾ ಹೊಗೆಯಲ್ಲಿ ಓಡಾಡುವವರು ತಲೆಗೆ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ ಎನ್ನುತ್ತಾರೆ. ನಿಮ್ಮ ಕೂದಲು ಯಾವ ಸ್ಥಿತಿಯಲ್ಲಿ ಇದೆ ಎನ್ನುವುದರ ಮೇಲೆ ನೀವು ಪ್ರತಿದಿನ ತಲೆಗೆ ಸ್ನಾನ ಮಾಡಬೇಕಾ ಬೇಡವಾ ಎನ್ನುವುದು ನಿರ್ಧಾರವಾಗುತ್ತದೆ. ಆದರೂ ದಿನಾ ತಲೆಗೆ ಸ್ನಾನ ಬೇಡ ಎನ್ನುತ್ತಾರೆ ತಜ್ಞರು

ಪ್ರತಿದಿನ ತಲೆಗೆ ಸ್ನಾನ ಮಾಡುವುದರಿಂದ ತಲೆ ಬುರುಡೆಯಲ್ಲಿ ಇರುವ ಅವಶ್ಯಕ ಅಂಶಗಳು ನಾಶವಾಗುತ್ತವೆ. ನೈಸರ್ಗಿಕವಾಗಿ ಕೂದಲ ಬುಡದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶ ಸಂಪೂರ್ಣವಾಗಿ ತೊಳೆದುಹೋಗುತ್ತದೆ. ಆಗ ಕೂದಲು ಶುಷ್ಕವಾಗಿ ಬಲಹೀನವಾಗುತ್ತದೆ. ಬೇಗ ತುಂಡಾಗುವುದು ಮಾತ್ರವಲ್ಲ, ಕೂದಲು ಉದುರುವುದು ಕೂಡಾ ಹೆಚ್ಚಾಗುತ್ತದೆ. ಹಾಗಾಗಿ ನೀವು ತುಂಬಾ ಧೂಳು ಇರುವ ಸ್ಥಳಕ್ಕೆ ಹೋಗಿದ್ದರೆ ಮಾತ್ರ ತಲೆಗೆ ಸ್ನಾನ ಮಾಡಿ, ಇಲ್ಲದಿದ್ದರೆ ದಿನಾಲೂ ಸ್ನಾನ ಮಾಡುವ ಅವಶ್ಯಕತೆ ಇಲ್ಲ.

ಪ್ರತಿದಿನ ತಲೆಗೆ ಸ್ನಾನ ಮಾಡುವುದರಿಂದ ನೀವು ಶ್ಯಾಂಪೂ ಬಳಸುವುದು ಕೂಡಾ ಹೆಚ್ಚಾಗುತ್ತದೆ. ಶ್ಯಾಂಪೂನಲ್ಲಿ ಇರುವ ರಾಸಾಯನಿಕಗಳು ಕೂದಲನ್ನು ಮತ್ತಷ್ಟು ಹಾಳುಗೆಡವುತ್ತವೆ. ಇದರಿಂದ ಮತ್ತಷ್ಟು ಕೂದಲು ಉದುರುವುದು, ಕೂದಲಿನ ತೇವಾಂಶ ನಾಶವಾಗುವುದು ಆಗುತ್ತದೆ.

ಕೂದಲಿಗೆ ತೇವಾಂಶ ಬಹಳ ಮುಖ್ಯ. ಹಾಗಾಗಿ ನೀವು ತಲೆಗೆ ಸ್ನಾನ ಮಾಡುವ ಹಿಂದಿನ ದಿನ ಎಣ್ಣೆ ಹಚ್ಚಿ ಒಳ್ಳೆ ಮಸಾಜ್ ಮಾಡುವುದು ಸಹಕಾರಿ. ತಜ್ಞರು ಹೇಳುವ ಪ್ರಕಾರ ಗಂಡಸರು ಎರಡು ದಿನಕ್ಕೊಮ್ಮೆ ಮತ್ತು ಮಹಿಳೆಯರು ವಾರದಲ್ಲಿ ಎರಡು ಬಾರಿ ತಲೆಗೆ ಸ್ನಾನ ಮಾಡಿದರೆ ಸಾಕಾಗುತ್ತದೆಯಂತೆ.

Leave A Reply

Your email address will not be published.