ಯೂರಿಯಾ ಮಿಶ್ರಿತ ಹುಲ್ಲು ತಿಂದು ಕರುಗಳ ಸಾವು
ಮಂಗಳೂರು : ಬೈಕಂಪಾಡಿ ಸಮೀಪ ಹೆದ್ದಾರಿ ಪಕ್ಕದಲ್ಲಿ ಬೆಳೆದಿದ್ದ ಯುರಿಯಾ ಮಿಶ್ರಿತ ಹುಲ್ಲನ್ನು ತಿಂದ ಎರಡು ಕರುಗಳು ಸಾವನ್ನಪ್ಪಿದ್ದು, ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕಂಪಾಡಿಯ ಯಂಗ್ ಸ್ಟಾರ್ ಬಳಿ ಲಾರಿಗಳಲ್ಲಿ ಯುರಿಯಾ ತುಂಬಿಸಿ ಅದಕ್ಕೆ ಸರಿಯಾಗಿ ಮುಚ್ಚದೆ ಸಾಗಾಟ ಮಾಡಲಾಗುತ್ತಿದೆ. ಹೀಗೆ ಸಾಗಿಸುವ ಸಂದರ್ಭದಲ್ಲಿ ರಸಗೊಬ್ಬರ ರಸ್ತೆಗೆ ಬಿದ್ದು, ಅದು ಮಳೆ ನೀರಿನಲ್ಲಿ ಕರಗಿ ಹುಲ್ಲಿನ ಜೊತೆ ಸೇರಿಕೊಂಡಿತ್ತು. ಇದೇ ಹುಲ್ಲನ್ನು ತಿಂದ ಎರಡು ಕರುಗಳು ಸತ್ತಿದ್ದರೆ, ಇನ್ನೊಂದು ಗೋವು ಚಿಂತಾಜನಕ ಸ್ಥಿತಿಯಲ್ಲಿದೆ.
ಸುರತ್ಕಲ್ ಪಶು ವೈದ್ಯರನ್ನು ಸ್ಥಳಕ್ಕೆ ಬರಲು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಸುರತ್ಕಲ್ ಆರೋಗ್ಯ ಇಲಾಖೆ, ಸ್ಥಳೀಯ ಸಂಚಾರಿ ಪೊಲೀಸರು ಹಾಗೂ ಮಂಗಳೂರು ನಗರ ಪಾಲಿಕೆ ಸದಸ್ಯರ ಗಮನಕ್ಕೆ ತರಲಾಗಿದೆ. ಎನ್ನೆಂಪಿಟಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಮೃತ ಕರುಗಳ ಅಂತಿಮ ಸಂಸ್ಕಾರವನ್ನು ವೇದಿಕೆ ಕಾರ್ಯಕರ್ತರು ನೆರವೇರಿಸಿದ್ದಾರೆ.
ಯೂರಿಯಾ ಸಾಗಿಸುವ ವೇಳೆ ಟರ್ಪಾಲ್ ಹಾಕದೇ ಸಂಚರಿಸುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಂಘಟನೆ ಕಾರ್ಯಕರ್ತರು ಪೊಲೀಸರನ್ನು ಆಗ್ರಹಿಸಿದ್ದಾರೆ.