ಮುಂದೆ ಶಿಕ್ಷಕರಾಗಿ ಮಕ್ಕಳಿಗೆ ವಿದ್ಯೆ ಹೇಳಿಕೊಡಬೇಕಾದವರು ಜೈಲುಪಾಲು !! | ಬ್ಲೂಟೂತ್ ಅಳವಡಿಸಿದ್ದ ಹೈಟೆಕ್ ಚಪ್ಪಲಿ ಧರಿಸಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಐವರ ಬಂಧನ
ಕಳ್ಳ ಚಾಪೆ ಅಡಿ ನುಗ್ಗಿದರೆ ಪೊಲೀಸರು ರಂಗೋಲಿ ಅಡಿಗೆ ನುಗ್ಗುವರು ಎಂಬ ಮಾತಿದೆ. ಅದರಂತೆ ಇಲ್ಲಿ ಪೊಲೀಸರು ಖತರ್ನಾಕ್ ಕಳ್ಳರನ್ನೇ ಸೆರೆ ಹಿಡಿದಿದ್ದಾರೆ. ಆ ಕಳ್ಳರು ಬೇರಾರು ಅಲ್ಲ, ಮುಂದೆ ಮಕ್ಕಳನ್ನು ತಿದ್ದಿ ತೀಡಬೇಕಾದ ಶಿಕ್ಷಕರೇ !!
ಹೌದು, ಬ್ಲೂಟೂತ್ ಸಾಧನ ಅಳವಡಿಸಿದ್ದ ಹೈಟೆಕ್ ಚಪ್ಪಲಿ ಧರಿಸಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಾಪಿ ಚಿಟ್ ನಡೆಸುವ ಮೂಲಕ ಪರೀಕ್ಷಾ ವಂಚನೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ವಶಕ್ಕೆ ಪಡೆಯಲಾದ ಚಪ್ಪಲಿ ಮೌಲ್ಯ ಬರೋಬ್ಬರಿ 6 ಲಕ್ಷ ರೂಪಾಯಿ. ಇತ್ತೀಚೆಗಷ್ಟೇ ಗ್ಯಾಂಗ್ ಒಂದು ತಲಾ 6 ಲಕ್ಷ ರೂ.ನಂತೆ 25 ಮಂದಿಗೆ ಚಪ್ಪಲಿಗಳ ಬ್ಲೂಟೂತ್ ಇರುವ ಚಪ್ಪಲಿಯ ಮಾರಾಟ ಮಾಡಿತ್ತು. ಬ್ಯೂಟೂತ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಹುಬ್ಬೇರಿಸಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆ ಎದುರಿಸಿದ್ದ ಕೆಲ ಅಭ್ಯರ್ಥಿಗಳ ಚಪ್ಪಲಿ ಮತ್ತು ಕಿವಿಯಲ್ಲಿ ಬ್ಲೂಟೂತ್ ಸಾಧನ ಇರುವುದು ಪತ್ತೆಯಾದ ಬಳಿಕ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಜೇರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಂಧಿತ ಐವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ. ಮಾರಾಟ ಮಾಡುತ್ತಿದ್ದವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.