ದ.ಕ. | ಪರಿಷ್ಕೃತ ಕೋವಿಡ್ ಮಾರ್ಗಸೂಚಿ ಪ್ರಕಟ ,ಏನಿದೆ ಷರತ್ತುಗಳು..
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ ಅ.1ರಿಂದ ಕಡ್ಡಾಯವಾಗಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಥಿಯೇಟರ್, ರಂಗಮಂದಿರ ಹಾಗೂ ಆಡಿಟೋರಿಯಂಗಳು ಮತ್ತು ಇದೇ ರೀತಿಯ ಸ್ಥಳಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆದೇಶಿಸಿದ್ದಾರೆ.
ಶೇ.1ಕ್ಕಿಂತ ಕಡಿಮೆ ಇರುವ ಕಡೆಗಳಲ್ಲಿ ಸಿನೆಮಾ ಮಂದಿರಗಳು ಶೇ.100ರಷ್ಟು ಆಸನ ಭರ್ತಿಗೆ ರಾಜ್ಯ ಸರಕಾರ ಅವಕಾಶ ನೀಡಿತ್ತು. ಆದರೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರರಕಣ ಇಳಿಕೆ ಕಂಡರೂ, ಪಾಸಿಟಿವಿಟಿ ದರ ಇನ್ನೂ ಶೇ.1ಕ್ಕಿಂತ ಕಡಿಮೆ ಇಳಿಯಲಿಲ್ಲ. ಇದೇ ಕಾರಣಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.
ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳ ಸಂಭಾವ್ಯ ಏರಿಕೆಯನ್ನು ತಡೆಯಲು ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೊರೊನಾ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಈವರೆಗೆ ಹೊರಡಿಸಿರುವ ನಿರ್ಬಂಧ / ಮಾರ್ಗಸೂಚಿ ಮತ್ತು ಆದೇಶಗಳಿಗೆ ಕೆಲವೊಂದು ಸೇರ್ಪಡೆ ಮತ್ತು ಮಾರ್ಪಾಡು ಮಾಡಿ ದ.ಕ. ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ರಾತ್ರಿ ಕರ್ಫ್ಯೂ ಮುಂದುವರೆಯಲಿದ್ದು, ಸೆ.25 ರಿಂದ ಅನ್ವಯವಾಗುವಂತೆ ರಾತ್ರಿ ಕರ್ಫ್ಯೂ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಥಿಯೇಟರ್, ರಂಗಮಂದಿರ ಹಾಗೂ ಆಡಿಟೋರಿಯಂಗಳು ಮತ್ತು ಇದೇರೀತಿಯ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಇರುತ್ತದೆ. ಇಂತಹ ಸ್ಥಳಗಳಿಗೆ ಗರ್ಭಿಣಿ ಮತ್ತು ಹಿರಿಯ ನಾಗರಿಕರು ಭೇಟಿ ನೀಡದಂತೆ ಸಲಹೆ ನೀಡಲಾಗಿದೆ.
ಇಲ್ಲಿನ ಪ್ರವೇಶದ್ವಾರದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಪ್ರತಿ ಪ್ರದರ್ಶನದ ನಂತರ ಮೇಲೆ ತಿಳಿಸಿದ ಸ್ಥಳಗಳ ವಿಶ್ರಾಂತ ಕೊಠಡಿಗಳು, ಶೌಚಾಲಯ ಸೇರಿದಂತೆ ಎಲ್ಲಾ ಸ್ಥಳಗಳನ್ನು ಸ್ವತ್ಛಗೊಳಿಸಬೇಕು. ಪ್ರವೇಶ ಮತ್ತು ನಿರ್ಗಮನ ಅಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಸಂಬಂಧಪಟ್ಟ ಅಡಳಿತ ವರ್ಗ, ಮಾಲಕರು ಅಥವಾ ಸಂಘಟಕರು ಒದಗಿಸಬೇಕು.
ಅ.3ರಿಂದ ಕಡ್ಡಾಯವಾಗಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವ ಪರತ್ತಿಗೊಳಪಟ್ಟು ಪಬ್ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳ ಕಾರ್ಯಚರಣೆ ಬಗ್ಗೆ ಈಗಾಗಲೇ ಹೊರಡಿಸಲಾದ ಆದೇಶ ಮುಂದುವರೆಯುವುದು. ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶವಿರುವ ಗಡಿಭಾಗಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕಾರ್ಯವನ್ನು ಮುಂದುವರೆಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಠಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.