ಮೇಲಾಧಿಕಾರಿಗಳ ಕಿರುಕುಳ ,ಕೆಎಸ್ಆರ್ಟಿಸಿ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು : ಕೆಎಸ್ಸಾರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ನಿಂಗಪ್ಪ ಇಮರಾಪುರ (40) ಆತ್ಮಹತ್ಯೆ ಮಾಡಿಕೊಂಡ ಕೆಎಸ್ಸಾರ್ಟಿಸಿ ಸಿಬ್ಬಂದಿ. ಇವರು ರವಿವಾರ ಸಂಜೆ ತನ್ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ವರ್ಷದಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕ/ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದ ನಿಂಗಪ್ಪ ಅವರಿಗೆ ಇತ್ತೀಚಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ನಿಂಗಪ್ಪರ ಸಹೋದರ ಮಹೇಶ್ ಆರೋಪಿಸಿದ್ದಾರೆ.
ವಾರದ ಹಿಂದೆ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಅಣ್ಣನಿಗೆ ಸೂಚಿಸಿದ್ದರು. ಅದರಂತೆ ಊರಲ್ಲಿದ್ದ ಅಣ್ಣ ಮಂಗಳೂರಿಗೆ ಆಗಮಿಸಿದ್ದರೂ ಕೆಲಸ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದರು. ಇದರಿಂದ ಬೇಸತ್ತು ರೂಮಲ್ಲಿದ್ದ ಅಣ್ಣ ಇತರರ ಕಣ್ಣಪ್ಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಅಣ್ಣನ ಪತ್ನಿ ಮತ್ತು ನಾಲ್ಕು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿಗೆ ಇದೀಗ ಆಸರೆ ಇಲ್ಲದಂತಾಗಿದೆ. ಕೆಎಸ್ಸಾರ್ಟಿಸಿ ಮೇಲಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.