ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಗ್ರಂಥ ಶೀಘ್ರದಲ್ಲಿ ಪ್ರಕಟ -ಸಚಿವ ಸುನೀಲ್ ಕುಮಾರ್
ಮಾನವ ಕುಲಕ್ಕೆ ಸಮನ್ವಯತೆ ಸಾರಿದ ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಸಮಗ್ರ ಅಧ್ಯಯನ್ನೊಳಗೊಂಡ ಗ್ರಂಥವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಹೊರತರಲು ಚಿಂತನೆ ನೀಡಲಾಗಿದೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ಸೆ.25ರಂದು ಮಂಗಳೂರಿನ ಟಿಎಂಎಪೈ ಕನ್ವೆಂಷನ್ ಸೆಂಟರ್‌ನಲ್ಲಿ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ಸಂಸ್ಕೃತಿ ಇಲಾಖೆಯಿಂದ ಈಗಾಗಲೇ ಸಾಹಿತಿ, ರಂಗಭೂಮಿ ಕಲಾವಿದರು, ಕವಿಗಳು, ಮಹಾಪುರುಷರ ಪುಸ್ತಕಗಳನ್ನು ಮುದ್ರಿಸಲಾಗಿದೆ. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪುಸ್ತಕ ಮುದ್ರಣವಾಗಿಲ್ಲ. ಇದಕ್ಕಾಗಿ ಈ ವರ್ಷದ ಡಿಸೆಂಬರ್‌ನೊಳಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಗ್ರ ಅಧ್ಯಯನದ ಪುಸ್ತಕ ಮುದ್ರಣವಾಗಲಿದೆ ಎಂದರು.
ತುಳುವಿಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ ಮತ್ತು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದು, ಇದಕ್ಕಿರುವ ತಾಂತ್ರಿಕ ತೊಡಕು ನಿವಾರಿಸಿ ಕೆಲವೇ ದಿನಗಳಲ್ಲಿ ತುಳುವಿಗೆ ಹೆಚ್ಚು ಮಾನ್ಯತೆ ಸಿಗುವಂತೆ ಮಾಡುತ್ತೇನೆ. ಹಿಂದುಳಿದ ವರ್ಗದಲ್ಲಿ ಬಿಲ್ಲವ ಸಮುದಾಯ ಬರುತ್ತಿದ್ದು, ನಾಲೈದು ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಸಣ್ಣ ಸಣ್ಣ ಸಮುದಾಯಗಳು ಒಂದಾಗಿ ಅದರ ನೇತೃತ್ವವನ್ನು ಬಿಲ್ಲವ ಸಮುದಾಯ ವಹಿಸಿಕೊಂಡರೆ ರಾಜ್ಯದಲ್ಲಿ ದೊಡ್ಡ ಪರಿವರ್ತನೆಯಾಗಲು ಸಾಧ್ಯವಿದೆ ಎಂದರು.
ಯಾವುದೇ ಸಂಘಟನೆ ನಿತ್ಯ ನಿರಂತವಾಗಿ ನಡೆಯಬೇಕಾದರೆ ಯುವಕರ ಪಾತ್ರ ದೊಡ್ಡ ಪ್ರಮಾಣದ್ದು, ಯುವಕರ ಪ್ರವೇಶ ಎಲ್ಲಿ ಆಗುವುದಿಲ್ಲವೋ ಆ ಸಂಘಟನೆ ದೀರ್ಘವಾಗಿ ಬಾಳಲು ಸಾಧ್ಯವಿಲ್ಲ. ಸಮುದಾಯದಲ್ಲಿ ಯುವಕರಿಗೆ ನೇತೃತ್ವ ಸಿಗಲಿಲ್ಲ ಎಂದಾದರೆ ಸಮಾಜದಲ್ಲೂ ನೇತೃತ್ವ ಸಿಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಬಿಲ್ಲವ ಸಮುದಾಯದ ಯುವಕರನ್ನು ಒಗ್ಗೂಡಿಸಲು ಬಿಲ್ಲವ ಬ್ರಿಗೇಡ್ ಪಣತೊಟ್ಟಿರುವ ಕೆಲಸ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ನಿರ್ದೇಶಕ ಶರಶ್ಚಂದ್ರ ಸನಿಲ್, ಕರ್ನಾಟಕ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಮುಂಬಯಿ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಜಿ. ಅಮೀನ್, ಬಿಲ್ಲವರ ಮಹಾಮಂಡಲದ ಮಾಜಿ ಉಪಾಧ್ಯಕ್ಷ ಗಂಗಾಧರ್ ಪೂಜಾರಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಸೂರಜ್ ಕುಮಾರ್, ಹಿನ್ನಲೆ ಗಾಯಕಿ ರೇಣುಕಾ ಕಾಣಿಯೂರು ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಮತ್ತು ನಿತಿನ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದೇವಿಕಿರಣ್ ಗಣೇಶಪುರ ಪ್ರಾರ್ಥಿಸಿದರು. ಕೇಶವ ಬಂಗೇರಾ ಮತ್ತು ದೀಪಕ್ ಕೋಟ್ಯಾನ್ ನಿರೂಪಿಸಿದರು.
Nice…….Latest Government Jobs