ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಐತಿಹಾಸಿಕ ತೀರ್ಪು ನೀಡಿದ ಕೋರ್ಟ್ | ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಎಷ್ಟೇ ಕಠಿಣ ನಿಯಮ ಬಂದರೂ ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಠಿಣ ಕಾನೂನು ಇಲ್ಲ ಎಂಬುದು ಹಲವರ ವಾದ. ಆರೋಪಿಗಳೆಲ್ಲರೂ ಕೆಲದಿನ ಸೆರೆವಾಸ ಅನುಭವಿಸಿ ನಂತರ ಜಾಮೀನಿನ ಮೂಲಕ ಹೊರ ಬರುತ್ತಾರೆ.
ಆದರೆ ಇಲ್ಲಿನ ನ್ಯಾಯಾಲಯವೊಂದು ಅತ್ಯಾಚಾರ ಯತ್ನಿಸಿದ ಆರೋಪಿಗೆ ವಿಚಿತ್ರ ತೀರ್ಪು ನೀಡಿದೆ. ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು ನೀಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. 20 ವರ್ಷದ ಲಾಲನ್ ಕುಮಾರ್ ಸಫೀ ಈ ಷರತ್ತಿನನ್ವಯ ಜಾಮೀನು ಪಡೆದಿದ್ದಾನೆ. ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜೆಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿ ಸರಿಸುಮಾರು 2000 ಮಹಿಳೆಯರು ಇದ್ದಾರೆ.
ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ಧೋಬಿಯಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ 2021 ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು. ಲಾಲನ್ ಕುಮಾರ್ ಷರತ್ತು ಜಾರಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕೋರ್ಟಿನ ತೀರ್ಮಾನವು ಗ್ರಾಮದ ಎಲ್ಲ ಮಹಿಳೆಯರಿಗೆ ಸಂತಸ ತಂದಿದೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧಿಕಾರಿಯಾದ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದು ಐತಿಹಾಸಿಕ ನಿರ್ಧಾರ. ಮಹಿಳೆಯರ ಬಗೆಗಿನ ಗೌರವ ಹೆಚ್ಚಿಸಲಿದೆ ಎಂದಿದ್ದಾರೆ. ಈ ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ. ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಗ್ರಾಮ ಪರಿಷತ್‍ನ ಮುಖ್ಯಸ್ಥೆಯಾಗಿರುವ ಅಂಜುಂ ಪರ್ವೀನ್ ಹೇಳಿದ್ದಾರೆ.
ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. 2020ರಲ್ಲಿ 28,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೊಂದು ಈ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟುವ ಪ್ರಮುಖ ಹೆಜ್ಜೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.