ಭಾರತ ಕೋವಿಡ್ ನಿರ್ವಹಣೆ ಮಾಡಿದಂತೆ ಬೇರೆ ಯಾವುದೇ ದೇಶ ನಿರ್ವಹಣೆ ಮಾಡಿಲ್ಲ – ಸುಪ್ರೀಂ ಕೋರ್ಟ್ ಮೆಚ್ಚುಗೆ
ಕೋವಿಡ್ 19 ಸಮಯದಲ್ಲಿ ಭಾರತ ನಿರ್ವಹಣೆ ಮಾಡಿದಂತೆ ಬೇರೆ ಯಾವುದೇ ದೇಶ ನಿರ್ವಹಣೆ ಮಾಡಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶಂಶೆ ವ್ಯಕ್ತಪಡಿಸಿದೆ.
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ದೇಶದಲ್ಲಿ ಸಾವಿರಾರು ಸಂಖ್ಯೆಯ ಸಾವು ಮತ್ತು ಆಮ್ಲಜನಕ ಕೊರತೆಯಂತಹ ಕಷ್ಟದ ಪರಿಸ್ಥಿತಿ ಇದ್ದರೂ ಸೋಂಕನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನ್ಯಾ.ಶಾ ಮತ್ತು ಎಎಸ್ ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.
ದೇಶದ ಜನಸಂಖ್ಯೆ, ಲಸಿಕೆಯ ವೆಚ್ಚಗಳು, ಆರ್ಥಿಕ ಪರಿಸ್ಥಿತಿ ಮತ್ತು ದೇಶ ಎದುರಿಸಿದ ಪ್ರತಿಕೂಲ ಸನ್ನಿವೇಶಗಳನ್ನು ಗಮನಿಸಿದರೆ ನಾವು ಅನುಕರಣೀಯ ಮಾದರಿ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ಮಾಡಿದ್ದಂತಹ ನಿರ್ವಹಣೆ ಬೇರೆ ಯಾವುದೇ ದೇಶಗಳು ಮಾಡಲು ಸಾಧ್ಯವಾಗಿಲ್ಲ ಎಂದು ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಪರಿಹಾರ ನೀಡುವ ಮೊತ್ತದ ಬಗ್ಗೆ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ನಾವು ಈಗ ತುಂಬಾ ಸಂತೋಷವಾಗಿದ್ದೇವೆ. ತೊಂದರೆ ಅನುಭವಿಸಿದ ವ್ಯಕ್ತಿಗಳಿಗೆ ಇದರಿಂದ ಸ್ವಲ್ಪವಾದರೂ ಸಾಂತ್ವನ ಸಿಗುತ್ತದೆ ಎಂದು ಕೋರ್ಟ್ ಹೇಳಿದೆ.
ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಸುಪ್ರೀಂ ಆಗ್ರಹಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಲಾ 50 ಸಾವಿರ ರೂ. ಘೋಷಿಸಿದೆ. ಈ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಹಣ ಲಭಿಸಲಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರವೇ ನೀಡಲಾಗುವುದು. ಮೃತ ಕುಟುಂಬಗಳು ದಾಖಲೆ, ಮರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಎಲ್ಲ ಅರ್ಜಿಯ ಪರಿಶೀಲನೆಯನ್ನು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ನಡೆಸಲಿದೆ. ಈ ಹಣ ನೇರವಾಗಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಸಿಗಲಿದೆ. ಸೋಂಕಿನ ನಿಯಂತ್ರಣದಲ್ಲಿ ಭಾಗಿಯಾದವರು ಅಥವಾ ನಿಯಂತ್ರಣಕ್ಕೆ ಸಿದ್ಧತೆ ವೇಳೆ ಸಾವನ್ನಪ್ಪಿರುವವರಿಗೂ ಪರಿಹಾರ ಸಿಗಲಿದೆ.