ಸರಕಾರದ ಯೋಜನೆಗಳು ಗ್ರಾಮ ಪಂಚಾಯತ್ ಮೂಲಕ ಜನಸಾಮಾನ್ಯರ ಬಳಿಗೆ : ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಗ್ರಾಮ ಪಂಚಾಯತ್‌ಗಳ ಮುಖೇನ ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸುತ್ತಿದ್ದು, ಇದನ್ನು 2022 ರ ಜನವರಿ 26 ರಂದು ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ನೂತನ ಯೋಜನೆ ‘ಅಮೃತ ಗ್ರಾಮ ಪಂಚಾಯತ್ ಯೋಜನೆ’ ಗೆ ವಿಧಾನಸೌಧದಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಗ್ರಾಮ ಪಂಚಾಯತ್‌ಗಳ ಮೂಲಕವೇ ಪಿಂಚಣಿ ಸೇವೆಯನ್ನು ಒಳಗೊಂಡಂತೆ, ಇನ್ನಿತರ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಪ್ರಾಯೋಗಿಕ ಹಂತದಲ್ಲಿ ಐದು ಜಿಲ್ಲೆಗಳಲ್ಲಿ ಆನ್ಲೈನ್ ಗ್ರಾಮ ಪಂಚಾಯತ್ ಮೂಲಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಅದಕ್ಕೆ ಅಗತ್ಯ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿ, ಗ್ರಾಮ ಪಂಚಾಯತ್ ಮೂಲಕವೇ ಸುಲಭವಾಗಿ ಪಡೆಯುವುದು ಸಾಧ್ಯವಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಅಮೃತ ಯೋಜನೆಯಡಿ 2300 ಕೋಟಿ ರೂ. ಗಳಷ್ಟರ ಕೆಲಸ ಮಾಡಲಾಗುತ್ತದೆ. ಶಾಲೆ, ಗ್ರಂಥಾಲಯ, ತ್ಯಾಜ್ಯ ನಿರ್ವಹಣೆ ಮೊದಲಾದವುಗಳ ಅಭಿವೃದ್ಧಿ ವಿಚಾರವಾಗಿ ಒಂದು ಪಂಚಾಯತ್‌ಗೆ ಸುಮಾರು 100 ಕೋಟಿ ಖರ್ಚು ಮಾಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.